ಹುಬ್ಬಳ್ಳಿ: ಶವಗಳ ಹೂತಿರುವ ಆರೋಪದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಕೆಲವರು ನಡೆಸುತ್ತಿರುವ ಅಪಪ್ರಚಾರ ಖಂಡಿಸಿ ಆ. 17ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹು-ಧಾ ಬಂಟರ ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ ಹೇಳಿದರು.
ನಗರದ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾತನಾಡಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳದೆ ಕೆಲ ಯೂಟ್ಯೂಬರ್‌ಗಳು ಧರ್ಮಸ್ಥಳದ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಇದು ಖಂಡನೀಯ. ಸರ್ಕಾರ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಎಸ್ಐಟಿ ರಚನೆ ಮಾಡಿದೆ. ಅದರಂತೆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧವೂ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಕ್ರಮಕೈಕೊಳ್ಳಬೇಕು ಎಂದು ಆಗ್ರಹಿಸಿದರು.
ದಕ್ಷಿಣ ಕನ್ನಡದ ದ್ರಾವಿಡ ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಮಾತನಾಡಿ, ಕೋಟ್ಯಂತರ ಭಕ್ತರ ಆರಾಧ್ಯದೈವ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಖಂಡನೀಯ. ಅರ್ಧಂಬರ್ಧ ತಿಳಿದುಕೊಂಡ ಕೆಲವರು ಭಕ್ತರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಧಾರ್ಮಿಕ ನಂಬಿಕೆಗೆ ಧಕ್ಕೆ ಬರಬಾರದು ಎಂದು ನಾವು ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.ಸಮುದಾಯದ ಮುಖಂಡ ಎಸ್.ಬಿ. ಶೆಟ್ಟಿ ಮಾತನಾಡಿ, ಕ್ಷೇತ್ರದ ಪಾವಿತ್ರ್ಯ ಹಾಳು ಮಾಡುವ ಕೆಲಸ ನಡೆಯುತ್ತಿದೆ. ತನಿಖೆ ನಡೆಯುವ ಸಂದರ್ಭದಲ್ಲಿ ತೀರ್ಪು ನೀಡಲು ಯಾರಿಗೂ ಅಧಿಕಾರವಿಲ್ಲ, ಈ ಷಡ್ಯಂತ್ರ ವಿರುದ್ಧ ನಾವೂ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಉದ್ಯಮಿ ರಾಜೇಂದ್ರ ಶೆಟ್ಟಿ ಮಾತನಾಡಿ, ಧರ್ಮಸ್ಥಳದ ಉಳಿವಿಗಾಗಿ ಎಂತಹದ್ದೇ ಹೋರಾಟಕ್ಕೆ ನಾವು ಸಿದ್ಧ. ಅಗತ್ಯವಿದ್ದರೆ ಅಪಪ್ರಚಾರ ಮಾಡುವವರ ವಿರುದ್ಧ ದೂರು ನೀಡಲೂ ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಗೆ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣರ ಸಂಘ ಹುಬ್ಬಳ್ಳಿ, ಬಿಲ್ಲವ ಸಂಘ ಹುಬ್ಬಳ್ಳಿ-ಧಾರವಾಡ, ಮೊಗವೀರ ಸಂಘ, ಹುಬ್ಬಳ್ಳಿ, ಮಲೆನಾಡು ಒಕ್ಕಲಿಗರ ಸಂಘ, ಹುಬ್ಬಳ್ಳಿ- ಧಾರವಾಡ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ ಎಂದರು.ಆ. 17ರಂದು ಸಂಜೆ 5ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟು ಸಂಜೆ 6.30ಕ್ಕೆ ಇಂದಿರಾ ಗ್ಲಾಸಿನ ಮನೆಯಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು. ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳುವರು. ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ರತ್ನಾಕರ ಶೆಟ್ಟಿ, ಸತೀಶ ಶೆಟ್ಟಿ, ಬಿಲ್ಲವ ಸಮುದಾಯದ ಕಾರ್ಯದರ್ಶಿ ವಿವೇಕ ಪೂಜಾರಿ, ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರತ್ನಾಕರ ಗೌಡ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.