ಅಧಿಕಾರದ ತೆವಲಿಗಾಗಿ ಕುಮಾರಸ್ವಾಮಿಯಿಂದ ಕ್ಷೇತ್ರ ಬದಲಾವಣೆ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Nov 07, 2024, 12:30 AM ISTUpdated : Nov 07, 2024, 12:31 AM IST
6ಕೆಆರ್ ಎಂಎನ್ 1.ಜೆಪಿಜಿಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಕುಮಾರಸ್ವಾಮಿಗೆ ರಾಮನಗರ, ಚನ್ನಪಟ್ಟಣ ಬಗ್ಗೆ ಪ್ರೀತಿ ಇದ್ದರೆ ಅಭಿವೃದ್ಧಿ ಕಾರಣಕ್ಕಾಗಿಯಾದರೂ ಕ್ಷೇತ್ರ ಬಿಡಬೇಕು. ನಿಮ್ಮ ಅನುಕೂಲಕ್ಕೆ ಲೋಕಸಭಾ ಸದಸ್ಯರಾದಿರಿ, ನಿಮ್ಮ ತೆವಲಿಗೆ ನೀವು ಬದಲಾದರೆ ನಾವು ನಿಮ್ಮ ಹಿಂದೆ ಬರಬೇಕೆ ಎಂದು ಚನ್ನಪಟ್ಟಣ ಜನರೇ ಕೇಳುತಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಕೇಂದ್ರ ಸಚಿವ ಕುಮಾರಸ್ವಾಮಿಯವರು ತಮ್ಮ ಅಧಿಕಾರದ ತೆವಲಿಗಾಗಿ ಕ್ಷೇತ್ರ ಬದಲಾವಣೆ ಮಾಡುತ್ತಲೇ ಬಂದಿದ್ದಾರೆ. ಕ್ಷೇತ್ರದ ಜನರು ಅಭಿವೃದ್ಧಿಗೆ ಮತ ಹಾಕುವ ನಿರ್ಣಯ ಮಾಡಿದ್ದಾರೆ. ಇನ್ನಾದರೂ ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಚುನಾವಣೆಯಿಂದ ದೂರ ಸರಿಯಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳುವ ಮುನ್ನ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವ್ಯಾರು ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಬಿಟ್ಟು ಹೋಗಿ ಅಂತ ಹೇಳಿಲ್ಲ. ನಿಮ್ಮ ಅನುಕೂಲಕ್ಕೆ ಕ್ಷೇತ್ರ ಬಿಡುವುದಾದರೆ, ಜನರ ಅನುಕೂಲ ನೋಡುವವರು ಯಾರು ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿಗೆ ರಾಮನಗರ, ಚನ್ನಪಟ್ಟಣ ಬಗ್ಗೆ ಪ್ರೀತಿ ಇದ್ದರೆ ಅಭಿವೃದ್ಧಿ ಕಾರಣಕ್ಕಾಗಿಯಾದರೂ ಕ್ಷೇತ್ರ ಬಿಡಬೇಕು. ನಿಮ್ಮ ಅನುಕೂಲಕ್ಕೆ ಲೋಕಸಭಾ ಸದಸ್ಯರಾದಿರಿ, ನಿಮ್ಮ ತೆವಲಿಗೆ ನೀವು ಬದಲಾದರೆ ನಾವು ನಿಮ್ಮ ಹಿಂದೆ ಬರಬೇಕೆ ಎಂದು ಚನ್ನಪಟ್ಟಣ ಜನರೇ ಕೇಳುತಿದ್ದಾರೆ. ರಾಮನಗರದಿಂದ ಚನ್ನಪಟ್ಟಣಕ್ಕೆ ಬಂದರು. ಚನ್ನಪಟ್ಟಣದಿಂದ ಮಂಡ್ಯಕ್ಕೆ ಬಂದಿದ್ದಾಯಿತು. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಮತ್ತೊಮ್ಮೆ ಕ್ಷೇತ್ರ ಬದಲಾಯಿಸುತ್ತಾರೆ ಎಂದು ಕಿಡಿಕಾರಿದರು.

ಅಭಿವೃದ್ಧಿಗಾಗಿ ಕೈ ಬೆಂಬಲಿಸಿ:

ದೇವೇಗೌಡರು ಹಾಸನದಲ್ಲಿ ಹುಟ್ಟಿದ್ದರೂ ರಾಮನಗರ ಜಿಲ್ಲೆ ಅವರ ಕುಟುಂಬಕ್ಕೆ ಕಾಮಧೇನಾಗಿದೆ. ರಾಮನಗರ ಜಿಲ್ಲೆ ಕುಮಾರಸ್ವಾಮಿಗೆ ಇಲ್ಲಿಯವರೆಗೂ ಗೆಲುವು ಕೊಟ್ಟಿದೆ. ಆದರೆ, ಕುಮಾರಸ್ವಾಮಿ ರಾಮನಗರ ಜಿಲ್ಲೆಗೆ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ. ಯೋಗೇಶ್ವರ್ ಸ್ಥಳೀಯರು, ಕೈಗೆ ಸಿಗುವ ವ್ಯಕ್ತಿ, ತಾಲೂಕಿಗೆ ನೀರಾವರಿ ತಂದವರು, ಉಪಮುಖ್ಯಮಂತ್ರಿ ನೀರಾವರಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಟ್ಟವರು. ಉಪಮುಖ್ಯಮಂತ್ರಿಗಳು ಈಗಾಗಲೇ ಚನ್ನಪಟ್ಟಣ ಅಭಿವೃದ್ಧಿಗೆ 500 ಕೋಟಿ ರು. ಘೋಷಣೆ ಮಾಡಿದ್ದಾರೆ. ಮೂರೂವರೆ ವರ್ಷ ಚನ್ನಪಟ್ಟಣದ ಅಭಿವೃದ್ಧಿಗಾಗಿ ಜನ ಮತ ಹಾಕುವಂತೆ ಚಲುವರಾಯಸ್ವಾಮಿ ಮನವಿ ಮಾಡಿದರು.

ಕುಮಾರಸ್ವಾಮಿ ಅವರನ್ನು ನಾವ್ಯಾರು ಟಾರ್ಗೆಟ್ ಮಾಡುತ್ತಿಲ್ಲ. ನಾವು ಇಲ್ಲಿವರೆಗೂ ಅವರನ್ನು ಬೈದಿಲ್ಲ. ನಾವು ಅವರನ್ನು ವಿರೋಧಿಗಳು ಎಂದು ಎಲ್ಲಿಯೂ ಹೇಳಿಲ್ಲ. ಅವರೇ ನಮ್ಮನ್ನು ಬೈದುಕೊಂಡು ತಿರುಗಾಡುತ್ತಿದ್ದಾರೆ.

ಗೌಡರ ಮಾತಿಗೆ ಕೌಂಟಲ್ ಕೊಡಲ್ಲ:

ನಿಖಿಲ್ ನನ್ನ ಮಗನಿದ್ದಂತೆ, ಅವರಿಗೆ ವಿರುದ್ಧವಾಗಿ ಮಾತನಾಡುವ ಅಗತ್ಯವಿಲ್ಲ. ದೇವೇಗೌಡರು ಹಿರಿಯ ರಾಜಕಾರಣಿಗಳು ಅವರಿಗೆ ಯಾರ ಬಗ್ಗೆಯಾದರೂ ಮಾತನಾಡುವ ಹಿರಿತನವಿದೆ. ಅವರು ಯಾರಿಗೆ ಬೇಕಾದರೂ ಸೊಕ್ಕು ಮುರಿಯುತ್ತೇನೆ, ಜಾಡಿಸಿ ಒದೆಯುತ್ತೇನೆ ಎಂದು ಹೇಳಬಹುದು. ಅವರ ಮಾತುಗಳೇ ಅವರಿಗೆ ಮುಳುವಾಗಲಿದೆ. ಅವರ ಮಾತಿಗೆ ನಾವು ಕೌಂಟರ್ ಕೊಡಲು ಆಗುವುದಿಲ್ಲ ಎಂದು ಹೇಳಿದರು.

ರಾಜಕಾರಣದಲ್ಲಿ ಪಕ್ಷಾಂತರ ಸಾಮಾನ್ಯ. ಜನತಾದಳವೇ ಅನೇಕ ಪಕ್ಷಗಳಾಗಿ ಬದಲಾವಣೆ ಆಗಿದೆ. ಅದೂ ಪಕ್ಷಾಂತರದ ಮಾದರಿಯೇ ಆಗಿತ್ತು. ಪಕ್ಷದಿಂದ ಯಾರಾದರೂ ಹೊರಗೆ ಹೋದರೆ, ಅದು ಅವರಿಗೆ ನಷ್ಟ. ಪಕ್ಷ ಬದಲಾವಣೆಗೆ ಯೋಗೇಶ್ವರ್ ಅವರನ್ನು ದೂರಿದರೆ ತಪ್ಪು. ಅನೇಕ ಕಾರಣಗಳಿಂದ ಅವರು ಪಕ್ಷ ಬದಲಿಸಿದ್ದಾರೆ. ಈಗ ಬಿಜೆಪಿ ಬಿಡಲು ಕುಮಾರಸ್ವಾಮಿ ಕಾರಣ ಎಂದು ದೂರಿದರು.

ನಿಖಿಲ್ ಗೆ ಚನ್ನಪಟ್ಟಣದಲ್ಲಿ ಅನ್ಯಾಯ ಆಗಿಲ್ಲ. ಚನ್ನಪಟ್ಟಣಕ್ಕೂ ನಿಖಿಲ್ ಗೆ ಎದುರಾದ ಹಿಂದಿನ ಸೋಲಿಗೂ ಯಾವುದೇ ಸಂಬಂಧ ಇಲ್ಲ, ಎರಡು ಬಾರಿ ಚನ್ನಪಟ್ಟಣದಿಂದ ಗೆದ್ದ ಕುಮಾರಸ್ವಾಮಿ ಕ್ಷೇತ್ರದ ಜನರ ಕೈಗೂ ಸಿಗಲಿಲ್ಲ, ಗೆಲ್ಲಿಸಿದ ಜನರ ಸಮಸ್ಯೆಗೂ ಸ್ಪಂದಿಸಲಿಲ್ಲ. ಆದರೆ, ಯೋಗೇಶ್ವರ್ ಅವರಿಗೆ ಎರಡು ಬಾರಿ ಸೋಲುಂಡು ಅನ್ಯಾಯ ಆಗಿದೆ. 4 ಬಾರಿ ಆಯ್ಕೆಯಾಗಿ ಸಚಿವರಾಗಿ , ವಿಧಾನ ಪರಿಷತ್ ಸದಸ್ಯರಾಗಿ ಚನ್ನಪಟ್ಟಣ ಅಭಿವೃದ್ಧಿ ಮಾಡಿದ್ದಾರೆ. ಚನ್ನಪಟ್ಟಣ ಅಭಿವೃದ್ಧಿಗೆ ಶ್ರಮಿಸಿದವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ. ರಾಜಕೀಯದಲ್ಲಿ ಪಕ್ಷ ಬದಲಾವಣೆ ಸಹಜ ಪ್ರಕ್ರಿಯೆ, ಇದಕ್ಕೆ ಯೋಗೇಶ್ವರ್ ದೂರುವುದರಲ್ಲಿ ಅರ್ಥವಿಲ್ಲ, ಭವಿಷ್ಯದಲ್ಲೂ ಯೋಗೇಶ್ವರ್ ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ