ಕೊಪ್ಪಳ:ಪುರುಷ ಪ್ರಧಾನ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಇನ್ನೂ ಸರಿಯಾದ ಸ್ಥಾನಮಾನ ನೀಡಿಲ್ಲ. ಕುಟುಂಬದಲ್ಲಿ ಹೆಣ್ಣು ಮಗು ನೋಡುವ ದೃಷ್ಠಿಕೋನ ಬೇರೆಯಾಗಿದೆ. ಆದರೆ ಹೆಣ್ಣು ಮಕ್ಕಳ ರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೊಳಿಸಿದೆ. ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ.ಹೇಳಿದ್ದಾರೆ.
ಪ್ರತಿ ವರ್ಷ ಜ.24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಹೆಣ್ಣು ಮಗುವಿನ ಮಹತ್ವದ ಬಗ್ಗೆ, ಹೆಣ್ಣು ಮಕ್ಕಳ ಸಮಾನತೆ ಮತ್ತು ಮಕ್ಕಳ ರಕ್ಷಣೆ ಕುರಿತು ಸಮಾಜದಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಹೆಣ್ಣು ಕುಟುಂಬದ ಕಣ್ಣು. ಸಮಾಜದ ಆಸ್ತಿ, ಮನೆ ಬೆಳಗುವ ನಂದಾದೀಪವಿದ್ದಂತೆ. ಮನೆಯೇ ಮೊದಲ ಪಾಠಶಾಲೆ.ತಾಯಿಯೇ ಮೊದಲ ಗುರು ಎಂಬುದನ್ನು ಅರಿಯಬೇಕು. ಚಿಕ್ಕಮಕ್ಕಳನ್ನು ನೋಡಿಕೊಳ್ಳುವವಳು ಹೆಣ್ಣು, ವಯಸ್ಸಾದವರ ಆರೈಕೆ ಮಾಡುವವಳೂ ಹೆಣ್ಣು, ಪ್ರತಿಯೊಂದು ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸುವವಳು ಹೆಣ್ಣು ಮಗಳು. ಆದ್ದರಿಂದ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮನೋಭಾವನೆ ಮಾಡದೆ ಪ್ರೀತಿಯಿಂದ ಕಾಣಬೇಕು. ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದ್ದು. ಇದಕ್ಕೆ ಕಾರಣ ಮೂಢನಂಬಿಕೆ,ಅಜ್ಞಾನ, ಅನಕ್ಷರತೆ, ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಒಂದು ವೇಳೆ ಲಿಂಗ ಪತ್ತೆ ಮಾಡಿ, ಹೆಣ್ಣು ಶಿಶುವಿನ ಗರ್ಭಪಾತ ಮಾಡಿಸಿದರೆ ₹10 ಸಾವಿರಗಳಿಂದ ₹1 ಲಕ್ಷಗಳವರೆಗೆ ದಂಡ ಹಾಗೂ 3-5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ಹೆಣ್ಣು ಸಂತತಿ ರಕ್ಷಿಸಿ ಸಮಾಜದಲ್ಲಿ ಸಮಾನತೆ ಕಾಪಾಡಬೇಕೆಂದು ಹೇಳಿದರು.ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೀಲಾ ಬಾಲ್ಯವಿವಾಹ ನಿಷೇಧ ಹಾಗೂ ಹೆಣ್ಣು ಮಕ್ಕಳ ಶಿಕ್ಷಣ ಕುರಿತು ವಿವರವಾಗಿ ಮಾತನಾಡಿದರು. ಸಮುದಾಯ ಆರೋಗ್ಯಾಧಿಕಾರಿ ಕವಿತಾ ಹದಿ-ಹರೆಯದವರ ಆರೋಗ್ಯ ರಕ್ಷಣೆ, ಹೆಣ್ಣು ಮಕ್ಕಳಿಗೆ ನೀಡುವ ಸೇವಾ ಸೌಲಭ್ಯಗಳ ಕುರಿತು ಹಾಗೂ ವೈಯಕ್ತಿಕ ಸ್ವಚ್ಛತೆ ಕುರಿತಂತೆ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ವೀರಣ್ಣ ವೈ.ಕಂಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕ ವಿರೇಶ, ಬುಡ್ಡಮ್ಮ,ಗವಿಸಿದ್ದಪ್ಪ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.