ಕಾರವಾರ: ಪತ್ರಕರ್ತರ ಮೇಲೆ ಜನರ ನಿರೀಕ್ಷೆ ಹೆಚ್ಚಿದ್ದು, ಆ ದಿಸೆಯಲ್ಲಿ ಪತ್ರಕರ್ತರು ಹೆಜ್ಜೆ ಇಡಬೇಕು. ಹಾಗೆಯೇ ಸಾಮಾಜಿಕ ಜವಾಬ್ದಾರಿಯನ್ನು ಎಂದೂ ಮರೆಯಬಾರದು ಎಂದು ಹಿರಿಯ ಪತ್ರಕರ್ತ ಜಯರಾಮ ಹೆಗಡೆ ಹೇಳಿದರು.
ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ. ಎಂಥ ಕಾಲಘಟ್ಟದಲ್ಲಿಯೂ ಪತ್ರಿಕೋದ್ಯಮ ತನ್ನ ಮೊನಚು ಕಳೆದುಕೊಂಡಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿಯೂ ಮುದ್ರಣ ಮಾಧ್ಯಮ ಪತ್ರಿಕೋದ್ಯಮ ತನ್ನ ಘನತೆ, ಗೌರವ ಉಳಿಸಿಕೊಂಡಿದೆ. ಇದು ನೂರಾರು ವರ್ಷ ಹೀಗೆಯೇ ಇರಲಿದೆ ಎಂದರು.
ಹಾಸನದಲ್ಲಿ ಪತ್ರಿಕೋದ್ಯಮ ಪ್ರಾರಂಭ ಮಾಡಿದ ದಿನದಿಂದ ಈ ತನಕ ನಾನು ವೃತ್ತಿಬದ್ಧವಾಗಿ ಮಾಡಿಕೊಂಡು ಬಂದಿರುವ ಕೆಲಸ ಮತ್ತು ಸೇವೆ ನನಗೆ ತೃಪ್ತಿ ತಂದಿದೆ. ಶಿರಸಿಯಲ್ಲಿ ಜನಮಾಧ್ಯಮ ಪತ್ರಿಕೆ ಪ್ರಾರಂಭ ಮಾಡಿದ್ದು, ಆ ಮೂಲಕ ಈ ಭಾಗದ ಜನರ ಜೀವನಾಡಿಯಾಗಿದ್ದು ಖುಷಿ ತಂದಿದೆ ಎಂದು ಹೇಳಿದರು.25 ವರ್ಷಗಳ ಹಿಂದೆ ಬೇಡ್ತಿ ಮತ್ತು ವರದಾ ನದಿ ಜೋಡಣೆಯನ್ನು ವಿರೋಧಿಸಿ ಜನಮಾಧ್ಯಮ ಪತ್ರಿಕೆಯಲ್ಲಿ ನಾನು ಸಂಪಾದಕೀಯ ಬರೆದಿದ್ದು, ಈಗಲೂ ಪ್ರಸ್ತುತವಾಗಿದೆ. ನದಿ ಜೋಡಣೆ ವಿರೋಧಿಸಿ ಚಳವಳಿ ನಡೆಯುತ್ತಿದೆ. ಈ ಬಗ್ಗೆ ಪತ್ರಿಕೆಯು ತನ್ನ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದರ ಬಗ್ಗೆ ತುಂಬಾ ಹೆಮ್ಮೆಯಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಎಂಬತ್ತರ ದಶಕದಲ್ಲಿ ಹಾಸನದಲ್ಲಿ ಜನತಾ ಮಾಧ್ಯಮ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ಜಯರಾಮ ಹೆಗಡೆ, ಶಿರಸಿಯಲ್ಲಿ ತಮ್ಮದೇ ಸಂಪಾದಕತ್ವದಲ್ಲಿ ಜನಮಾಧ್ಯಮ ಪತ್ರಿಕೆಯ ಮೂಲಕ ನಡೆಸಿದ ಪತ್ರಿಕೋದ್ಯಮ ಜನಪರ ಪತ್ರಿಕೋದ್ಯಮಕ್ಕೆ ಕನ್ನಡಿಯಾಗಿದೆ ಎಂದರು.
84 ವರ್ಷದ ತುಂಬು ಜೀವನ ಸಾಗಿಸಿರುವ ಜಯರಾಮ ಹೆಗಡೆ ಅವರು ಪತ್ರಕರ್ತರಾಗಿ, ಸಾಹಿತಿಯಾಗಿ ಮತ್ತು ಸಂಘಟಕರಾಗಿ ಮಾಡಿರುವ ಸೇವೆ ಅನನ್ಯ. ಅವರು ಶತಾಯುಷಿಗಳಾಗಿ ಬಾಳಲಿ ಎಂದು ತಗಡೂರು ಶುಭ ಹಾರೈಸಿದರು.