ಮುಂಡರಗಿ: ಸಾಹಿತ್ಯ ಎಂದರೆ ಕೇವಲ ಕೇಳುವುದಲ್ಲ. ಅದನ್ನು ಅಧ್ಯಯನ, ಸಂಶೋಧನೆ ಮಾಡಿ, ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ನಿಜವಾದ ಸಾಹಿತ್ಯದ ಬೆಳವಣಿಗೆಯಾಗುತ್ತದೆ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಕೇವಲ ವ್ಯರ್ಥವಾಗಿ ಮಾತನಾಡುವ ಭಾಷೆ ಕನ್ನಡವಲ್ಲ. ತಿಳಿದು ಅರ್ಥ ಮಾಡಿಕೊಂಡು ಮಾತನಾಡುವ ಶಕ್ತಿ ಕನ್ನಡಿಗರಿಗೆ ಮತ್ತು ಕನ್ನಡ ಭಾಷೆಗೆ ಇದೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳುತ್ತಾರೆ. ಅದು ಸುಳ್ಳು. 4ರಿಂದ 5 ಸಾವಿರ ವರ್ಷಗಳ ಹಿಂದೆಯೇ ಕನ್ನಡ ಭಾಷೆ ಇತ್ತೆಂದು ಚಿತ್ರ ಲಿಪಿಕಾರರು ಇತಿಹಾಸಕಾರರು ಬರೆಯುತ್ತಾರೆ. ಅಂತಹ ಕನ್ನಡ ಸಾಹಿತ್ಯ ಅತ್ಯಂತ ಪುರಾತನವಾದುದು. ಹೀಗಾಗಿ ಎಲ್ಲರೂ ಕನ್ನಡವನ್ನು ಬಳಸಿ, ಉಳಿಸಿ, ಬೆಳೆಸಬೇಕು. ಅಂದಾಗ ಕನ್ನಡ ಭಾಷೆ ಕೀರ್ತಿ ಇನ್ನಷ್ಟು ಉನ್ನತ ಮಟ್ಟಕ್ಕೇರುತ್ತದೆ ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಇಂದಿನ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದ್ದು, ಇಂತಹ ಸಾಹಿತ್ಯ ಸಮಾವೇಶ, ಸಾಹಿತ್ಯ ಸಮ್ಮೇಳನ, ಸಾಹಿತ್ತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅಂದಾಗ ಮಕ್ಕಳಿಗೆ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಸೂಪರ್ ಸೀಡ್ ಆಗಿರುವುದು ವಿಷಾದದ ಸಂಗತಿ ಎಂದರು.ಹೇಮಗಿರೀಶ ಹಾವಿನಾಳ ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿತ್ತಿದೆ. ಯಾವುದೇ ಶಾಸಕರ, ಸಂಸದರ ನಿಧಿಯನ್ನು ತೆಗೆದುಕೊಳ್ಳಲಾರದೇ ಕನ್ನಡಿಗರ ಹಾಗೂ ಕನ್ನಡ ಮನಸ್ಸುಗಳುಳ್ಳವರಿಂದ ₹21 ಲಕ್ಷದವರೆಗೆ ದೇಣಿಗೆ ಪಡೆದುಕೊಂಡು ನಿರ್ಮಾಣವಾದ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನಕ್ಕೆ ಅನ್ನದಾನೀಶ್ವರ ಸ್ವಾಮೀಜಿ ಭೂಮಿದಾನ ಮಾಡಿರುವುದಲ್ಲದೇ ₹2 ಲಕ್ಷ ಧನಸಹಾಯವನ್ನೂ ಮಾಡಿದ್ದಾರೆ ಎಂದರು.ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು. ಕರ್ನಾಟಕ ವೀರಶೈವ ಸಾಹಿತ್ಯ ಚರಿತೆ ಗ್ರಂಥ ಬಿಡುಗಡೆಯಾಯಿತು. ಕನ್ನಡ ಸಾಹಿತ್ಯ ಭವನಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಗೌರವ ಸನ್ಮಾನ ಜರುಗಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ. ಎ.ಬಿ. ಹಿರೇಮಠ ಆಶಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ್, ಕುಮಾರಸ್ವಾಮಿ ಹಿರೇಮಠ, ರವಿ ಲಮಾಣಿ, ಸೀತಾ ಬಸಾಪೂರ, ಡಾ. ಆರ್.ಎಂ. ಷಡಕ್ಷರಯ್ಯ, ಈಶ್ವರಪ್ಪ ಹಂಚಿನಾಳ, ಡಾ. ಎಸ್.ಎಂ. ಹಿರೇಮಠ, ಡಾ. ವಿಜಯಕುಮಾರ ಕಮ್ಮಾರ, ಆರ್.ವೈ. ಪಾಟೀಲ, ಹನಮರಡ್ಡಿ ಇಟಗಿ, ಎಂ.ಐ. ಮುಲ್ಲಾ, ವೀಣಾ ಪಾಟೀಲ, ಕೃಷ್ಣಾ ಸಾಹುಕಾರ, ಸಿ.ಕೆ. ಗಣಪ್ಪನವರ, ಕೆ.ಕೆ. ಬಿಳಿಮಗ್ಗದ, ಸುರೇಶ ಭಾವಿಹಳ್ಳಿ, ಎನ್.ಎನ್. ಕಲಕೇರಿ, ಅಕ್ಕಮ್ಮ ಕೊಟ್ಟೂರಶೆಟ್ಟರ್ ಇತರರು ಉಪಸ್ಥಿತರಿದ್ದರು. ಮಂಜುನಾಥ ಮುಧೋಳ ನಿರೂಪಿಸಿ, ಮಂಜುಳಾ ಇಟಗಿ ವಂದಿಸಿದರು.