- ಸ್ಥಳೀಯರ ಅಹವಾಲು ಸ್ವೀಕಾರ । ಪರಿಹಾರಕ್ಕೆ ಸೂಚನೆ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪುರಸಭೆ ಮುಖ್ಯಾಧಿಕಾರಿ ಜೆ.ವಿ. ಮಂಜುನಾಥ್ ಶನಿವಾರ ಮುಂಜಾನೆ ಪಟ್ಟಣದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳಿಂದ ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಆಲಿಸಿದರು. ಅಲ್ಲದೇ, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.ಮುಂಜಾನೆ ಪುರಸಭೆ ಕಚೇರಿಗೆ ಬಂದ ಮುಖ್ಯಾಧಿಕಾರಿ ಎಲ್ಲ ಪೌರಕಾರ್ಮಿಕರ ಹಾಜರಾತಿ ಪಡೆದುಕೊಂಡು ನಂತರ ರಾಷ್ಟ್ರೀಯ ಹೆದ್ದಾರಿ- 13, ಕಾಲೇಜು ರಸ್ತೆ, ಜೆ.ಎಚ್. ಪಟೇಲ್ ನಗರ, ನೃಪತುಂಗಾ ರಸ್ತೆ, ಕಣಸಾಲು ಬಡಾವಣೆ ಸೇರಿದಂತೆ ಮುಂತಾದ ಬಡಾವಣೆಗಳಿಗೆ ತೆರಳಿದರು. ಸ್ಥಳೀಯರಿಂದ ಕುಡಿಯುವ ನೀರು ವಿತರಣೆ, ಕಸ ಸಂಗ್ರಹಣೆಯ ವಾಹನದ ಬಳಕೆ ಆಗುತ್ತಿದೆಯೇ, ಚರಂಡಿಗಳ ಸ್ವಚ್ಚತೆ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಅನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜೆ.ವಿ. ಮಂಜುನಾಥ್, ಚನ್ನಗಿರಿಯ ಪುರಸಭೆ ಮುಖ್ಯಾಧಿಕಾರಿಯಾಗಿ ಬಂದು 15 ದಿನಗಳಾಗಿವೆ. ಇನ್ನು ಮುಂದೆ ವಾರದಲ್ಲಿ 2 ದಿನ ಬೆಳಗ್ಗೆ ಒಂದು ಅಥವಾ 2 ಪುರಸಭೆಯ ವಾರ್ಡ್‌ಗಳಿಗೆ ಭೇಟಿನೀಡಿ ಸ್ವಚ್ಚತೆ ಸೇರಿದಂತೆ ಪುರಸಭೆಯ ವತಿಯಿಂದ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳ್ಳುತ್ತಿಯೇ ಇಲ್ಲವೆಂದು ನಾಗರೀಕರನ್ನೇ ವಿಚಾರಿಸಲಾಗುವುದು ಎಂದರು. ಚನ್ನಗಿರಿ ಪಟ್ಟಣದಲ್ಲಿ 5ರಿಂದ 6 ಸಾವಿರ ಮನೆಗಳಿದ್ದು ನಮ್ಮಲ್ಲಿ 4 ಕಸ ಸಂಗ್ರಹ ಗಾಡಿಗಳು ಇವೆ. ಪ್ರತಿ ಮನೆಯಿಂದ ಕಸ ಸಂಗ್ರಹಣೆ ಮಾಡಲು ಈ ಗಾಡಿಗಳು ಬರಲಿವೆ. ಕಸವನ್ನು ಎಲ್ಲಿಬೇಕಲ್ಲಿ ಎಸೆಯದೇ, ಪುರಸಭೆ ಕಸದ ಗಾಡಿಗಳಿಗೆ ತಪ್ಪದೇ ನೀಡಬೇಕು. ಪ್ರತಿಯೊಬ್ಬರು ಹಸಿಕಸ- ಒಣ ಕಸ ವಿಂಗಡಿಸಿ ಕೊಡಬೇಕು ಮನವಿ ಮಾಡಿದರು.
ಜೆ.ಎಚ್. ಪಟೇಲ್ ಬಡಾವಣೆಯ ಅಂಗನವಾಡಿ ಕೇಂದ್ರಕ್ಕೆ ನೀರು ಸಂಗ್ರಹಣೆಯ ಸಿಂಟೆಕ್ಸ್ ಟ್ಯಾಂಕ್, ಮೋಟಾರ್, ಪೈಪ್ ಲೈನ್ ಮಾಡಿಸಿಕೊಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಮುಖ್ಯಾಧಿಕಾರಿ ಗಮನಕ್ಕೆ ತಂದರು. ಆಗ ಸ್ಥಳದಲ್ಲಿದ್ದ ಅಭಿಯಂತರ ಮಂಜುನಾಥ್ ಅವರಿಗೆ 2 ದಿನದಲ್ಲಿ ನೀರಿನ ಟ್ಯಾಂಕ್, ಮೋಟಾರು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಬಡಾವಣೆಯ ಮನೆಗಳಿಗೆ ಹಕ್ಕುಪತ್ರ ನೀಡಲು ಶಾಸಕರ ಗಮನಕ್ಕೆ ತರಲಿದ್ದು, ಶಾಸಕರ ಸಲಹೆಯಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
- - -
ಚನ್ನಗಿರಿ ಪಟ್ಟಣದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಜೆ.ವಿ.ಮಂಜುನಾಥ್ ಸ್ಥಳೀಯರಿಂದ ಅಹವಾರಲು ಸ್ವೀಕರಿಸಿದರು. ಅಭಿಯಂತರ ಮಂಜುನಾಥ್ ಮತ್ತಿತರರು ಇದ್ದರು.