ಹರಪನಹಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶ್ರೀರಾಮನ ಸಂಭ್ರಮೋತ್ಸವ ನಡೆಯಿತು.
ಪಟ್ಟಣದ ತೆಲುಗರ ಓಣಿಯಲ್ಲಿರುವ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮನಿಗೆ ಅಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ತೆಲುಗರ ಓಣಿಯ ಉದ್ದಕ್ಕೂ ಕೇಸರಿ ಧ್ವಜಗಳನ್ನು ಕಟ್ಟಲಾಗಿತ್ತು. ಕೊಟ್ಟೂರು ರಸ್ತೆಯ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜ ಮತ್ತು ಹಿಂದೂ ಸಮಾಜದ ಸಹಯೋಗದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಅಲಂಕಾರ ಮಹಾಮಂಗಳಾರತಿ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 1992ರಲ್ಲಿ ಅಯೋಧ್ಯೆಯಲ್ಲಿ ಕರಸೇವೆ ಸಲ್ಲಿಸಿದ ಸ್ಥಳೀಯ ಕರಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಗೌಳೇರ ಓಣಿಯಲ್ಲಿ ಬೃಹತ್ ಶ್ರೀರಾಮನ ದೇವರ ಕಟೌಟ್ ನಿಲ್ಲಿಸಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಠದಕೇರಿಯಲ್ಲಿ ಸಹ ಶ್ರೀರಾಮ ದೇವರ ಸ್ಮರಣೆ ನಡೆಯಿತು. ವಾಲ್ಮೀಕಿ ನಗರದಲ್ಲಿ ಶ್ರೀರಾಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಲಾಯಿತು. ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ತಾರಕಹೋಮ ನಡೆಯಿತು. ಪ್ರವಾಸಿ ಮಂದಿರದ ಬಳಿಯಿರುವ ಉಕ್ಕಡದ ಹುಲಿಬೆಂಚಿ ಆಂಜನೇಯ ದೇವಸ್ಥಾನದಲ್ಲಿ ಪೂಜೆಯೊಂದಿಗೆ ಕೊಸಂಬರಿ ಪಾನಕವನ್ನು ಭಕ್ತರಿಗೆ ವಿತರಣೆ ಮಾಡಲಾಯಿತು.
ತಾಲೂಕಿನ ಮತ್ತಿಹಳ್ಳಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ವಿಜಯನಗರ ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಪಾಲ್ಗೊಂಡಿದ್ದರು. ಪಟ್ಟಣದೆಲ್ಲೆಡೆ ಕೇಸರಿ ಬಾವುಟ, ರಾಮನ ಭಾವಚಿತ್ರವಿರುವ ಫ್ಲೆಕ್ಸ್, ಬ್ಯಾನರ್ ರಾರಾಜಿಸುತ್ತಿದ್ದವು.ತಾಲೂಕಿನ ವಿವಿಧ ಗ್ರಾಮಗಳಲ್ಲಿನ ದೇವಸ್ಥಾನಗಳಲ್ಲಿ ತೆಂಗಿನ ಗರಿ, ಮಾವಿನ ತೋರಣ ಹಾಗೂ ಬಾಳೆಕಂಬಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಶ್ರೀರಾಮನಿಗೆ ₹1 ಲಕ್ಷ ದೇಣಿಗೆ: ಪಟ್ಟಣದ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಹಾಗೂ ಕುಟುಂಬದವರು ₹1 ಲಕ್ಷದ 1ರ ಚೆಕ್‌ನ್ನು ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯರ ಮೂಲಕ ಅಯೋಧ್ಯೆಯ ಶ್ರೀರಾಮ ದೇವರಿಗೆ ದೇಣಿಗೆ ನೀಡಿದ್ದಾರೆ.ಮೋದಿ ಮತ್ತೊಮ್ಮೆ ಪ್ರಧಾನಿ: ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್, ಪಟ್ಟಣದ ತೆಲುಗರ ಓಣಿಯಲ್ಲಿರುವ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆಯಾಗಿರುವುದು ಇಡೀ ದೇಶದ ರಾಮ ಭಕ್ತರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಎಲ್ಲೆಡೆ ಅನ್ನದಾಸೋಹ, ವಿಶೇಷ ಪೂಜೆ ನಡೆಯುತ್ತಿದೆ. ಕಳೆದ 500 ವರ್ಷಗಳಿಂದ ಮಾಡಿದ ಹೋರಾಟ ಸಾರ್ಥಕವಾಗಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ವಿಶೇಷ ಪೂಜೆಯಲ್ಲಿ ಮಾಜಿ ಕಂದಾಯ ಸಚಿವ ಜಿ. ಕರುಣಾಕ ರೆಡ್ಡಿ, ವಿಷ್ಣುವರ್ಧನ ರೆಡ್ಡಿ, ಪುರಸಭೆ ಸದಸ್ಯರಾದ ಎಚ್.ಎಂ. ಅಶೋಕ, ಕಿರಣ್ ಶ್ಯಾನಬಾಗ್, ಗೌಳಿ ವಿನಯಕುಮಾರ, ಮುಖಂಡರಾದ ಆರುಂಡಿ ನಾಗರಾಜ, ಆರ್. ಲೋಕೇಶ, ಬಾಗಳಿ ಕೊಟ್ರೇಶಪ್ಪ, ಯಡಿಹಳ್ಳಿ ಶೇಖಪ್ಪ, ಶಶಿಕಾಂತ ಸ್ಪಟಿಕ, ಸುನೀಲ ಸ್ಪಟಿಕ, ಸಂತ ಜ್ಞಾನೇಶ್ವರ ಮಹಾರಾಜ, ತಿಮ್ಮಪ್ಪ, ರಾಘವೇಂದ್ರ ಶೆಟ್ಟಿ, ನಟೇಶಕುಮಾರ, ರವಿಶಂಕರ, ಮುದಗಲ್ ಕೃಷ್ಣಪ್ಪ, ಶ್ರೀಧರ ಶೆಟ್ಟಿ, ಮುದುಗಲ್ ಗುರುನಾಥ, ಪೆಂಡಕೂರು ಅನಂತಶೆಟ್ಟಿ, ದಯಾನಂದ ಶೆಟ್ರು, ವೀರಣ್ಣ, ಕೆ. ಪ್ರಕಾಶ, ಮಲ್ಲೇಶ, ಆಂಜನೇಯ, ಕೌಟಿ ವಾಗೀಶ್, ಡಿಶ್ ವೆಂಕಟೇಶ್, ಮಲ್ಲೇಶ್ ಇತರರು ಇದ್ದರು.