ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ, ಮುಂದಿನ ಬೇಸಿಗೆಯವರೆಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೀರಿನ ಕಾಯ್ದಿರಿಸು ವುದು, ಕೃಷಿ ಚಟುವಟಿಕೆಗಳು, ನೀರಾವರಿ ಸಮಸ್ಯೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಬಹುತೇಕ ಟಿಎಲ್‌ಬಿಸಿ ನೀರು ಪೂರೈಕೆ ವಿಚಾರವಾಗಿಯೇ ಚರ್ಚೆ ಸಾಗಿದರು. ನೀರಿನ ವಿಚಾರವಾಗಿ ಯಾವುದೇ ಪರಿಹಾರ ಕಂಡುಕೊಳ್ಳಲಾಗದೇ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಮಸ್ಯೆಯನ್ನು ಜೀವಂತವಾಗಿಯೇ ಇರಿಸಿ ಸಚಿವರು ಸಭೆಯನ್ನು ಮೊಟಕುಗೊಳಿಸಿದರು.
ಶ್ರೀಘ್ರ ಐಸಿಸಿ ಸಭೆ ಆಯೋಜನೆ: ಬರಗಾಲದ ಹಿನ್ನೆಲೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕ ನೀರು ಒದಗಿಸುವ ಕುರಿತು ಚರ್ಚಿಸಲು ಮತ್ತು ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಕೂಡಲೇ ಐಸಿಸಿ ಸಭೆಯನ್ನು ಕರೆಯುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಐಸಿಸಿ ಸಮಿತಿಯ ಅಧ್ಯಕ್ಷರಾದ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆಯುವ ಮೂಲಕ ಶ್ರೀಘ್ರವೇ ಐಸಿಸಿ ಸಭೆಯನ್ನು ಆಯೋಜನೆ ಮಾಡುವಂತೆ ತಿಳಿಸಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದರು.ಕುಡಿಯುವ ನೀರಿಗೆ ಪ್ರಥಮ ಆದ್ಯತೆ: ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಸ್ಪಷ್ಟ ನಿರ್ದೇಶನದಂತೆ ಈ ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಿದೆ. ನ.10ರ ಗಡುವಿನೊಳಗೆ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಸುಧಾರಿಸದಿದ್ದರೆ ಎದುರಾಗುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿ ಸಬೇಕಾಗುತ್ತದೆ. ರಾಯಚೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಿಗದಿತ ಅಡಿಗಳವರೆಗೆ ನೀರು ಲಭ್ಯವಿರಬೇಕಿದೆ. ನೀರಾವರಿ ಇಲಾಖೆಯು ಬಿಡುಗಡೆ ಮಾಡು ವ ನೀರಿನ ಪ್ರಮಾಣಕ್ಕೂ ಮತ್ತು ವಾಸ್ತವವಾಗಿ ಆಗಬೇಕಿರುವ ಅಗತ್ಯತೆಗೂ ಸಮನ್ವಯತೆ ಇರಬೇಕು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನೀರಾವರಿ ಇಲಾಖೆ ಹಾಗೂ ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಈ ಬರಗಾಲವನ್ನು ಸಮರ್ಥವಾಗಿ ಎದುರಿಸಲು ಕೈಜೋಡಿಸಬೇಕಿದೆ. ಜಿಲ್ಲೆಯಾದ್ಯಂತ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಆಡಳಿತ ಯಂತ್ರವು ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಅಧಿಕಾರಿಗಳಿಗೆ ಫುಲ್ ಕ್ಲಾಸ್ : ಸಭೆಯಲ್ಲಿ ಸಚಿವರು, ಶಾಸಕರು, ಎಂಎಲ್ಸಿ ಹಾಗೂ ಡಿಸಿ ಪಶು ಸಂಗೋಪನೆ ನಿರ್ದೇಶಕರು, ಮಾನ್ವಿ, ಸಿಂಧನೂರು ತಾಪಂ ಇಒ, ಆರ್‌ಡಬ್ಲ್ಯೂಎಸ್ ಅಧಿಕಾರಿಗಳು, ತುಂಗಭದ್ರಾ ಜಲಾಶಯದ ಮುಖ್ಯ ಎಂಜಿನೀಯರ್, ಉಪವಿಭಾಗದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಆರಂಭದಲ್ಲಿ ಪಶು ಸಂಗೋಪನ ಇಲಾಖೆಯ ಅಧಿಕಾರಿ ಪೋಮ್ ಸಿಂಗ್ ಮೇವು ಸಂಗ್ರಹ, ಬ್ಯಾಂಕ್ ಹಾಗೂ ವಿತರಣೆ ಮಾಹಿತಿಯನ್ನುಸರಿಯಾಗಿ ನೀಡದ್ದಕ್ಕೆ ಕೆಂಡ ಕಾರಿದ ಜನಪ್ರತಿ ನಿಧಿಗಳು, ತಕ್ಷಣವೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಂಚರಿಸಿ ಜಾನುವಾರು, ಮೇವು ಹಾಗೂ ಮೇವಿನ ಬ್ಯಾಂಕ್ ಸ್ಥಾಪನೆ ಕುರಿತು ಅಧ್ಯಯನ ನಡೆಸಿ ಡಿಸಿ ಮುಖಾಂತರ ವರದಿ ಸಲ್ಲಿಸುವಂತೆ ತಿಳಿಸಿದರು.
144 ನಿಷೇಧ ಉಲ್ಲಂಘನೆ ವಿರುದ್ಧ ಕ್ರಮಕ್ಕೆ ಸೂಚನೆ: ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ 144 ಜಾರಿಗೊಳಿಸಿ ನಿಷೇಧದ ನಡುವೆ ಯೂ ಗೇಟ್ ಮುರಿಯಲು ಯತ್ನಿಸಿದ, ಕಾಲುವೆ ಮೇಲೆ ಪ್ರತಿಭಟನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.