ಕೋಟಿ ಗಾಯಿತ್ರಿ ಯಜ್ಞ ಜಪ ಹೆಬ್ಬಾರ ಬ್ರಾಹ್ಮಣ ಸಂಘಟನೆಗೆ ಬಲ ತಂದಿದೆ: ಜಿ.ಸಿ.ಗೋಪಾಲ ಕೃಷ್ಣ

KannadaprabhaNewsNetwork |  
Published : Jul 29, 2026, 02:00 AM IST
ನರಸಿಂಹರಾಜಪುರ ತಾಲೂಕಿನ ಕಾನೂರು ಸಿದ್ದಿವಿನಾಯಕ ದೇವಸ್ಥಾನದಲ್ಲಿ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎನ್.ಆರ್.ಪುರ ಘಟಕದ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿಯ ಅಧ್ಯಕ್ಷ ವಿಜಯ ರಂಗ ಕೋಟೆ ತೋಟ ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಕೋಟಿ ಗಾಯಿತ್ರಿ ಯಜ್ಞ ಜಪ ಮಲೆನಾಡ ಹೆಬ್ಬಾರ ಬ್ರಾಹ್ಮಣ ಸಂಘಟನೆಗೆ ಬಲ ತಂದಿದೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಜಿ.ಸಿ.ಗೋಪಾಲ ಕೃಷ್ಣ ತಿಳಿಸಿದರು.

- ಕಾನೂರಿನಲ್ಲಿ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎನ್.ಆರ್.ಪುರ ಘಟಕದ ವಾರ್ಷಿಕ ಸರ್ವ ಸದಸ್ಯರ ಸಭೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕೋಟಿ ಗಾಯಿತ್ರಿ ಯಜ್ಞ ಜಪ ಮಲೆನಾಡ ಹೆಬ್ಬಾರ ಬ್ರಾಹ್ಮಣ ಸಂಘಟನೆಗೆ ಬಲ ತಂದಿದೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಜಿ.ಸಿ.ಗೋಪಾಲ ಕೃಷ್ಣ ತಿಳಿಸಿದರು.

ಭಾನುವಾರ ಕಾನೂರಿನ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆದ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎನ್.ಆರ್.ಪುರ ಘಟಕ ಹಾಗೂ ಯುವ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಬ್ರಾಹ್ಮಣರಾದವರು ಪ್ರತಿನಿತ್ಯ ಸಂಧ್ಯಾವಂದನೆ ಮಾಡಬೇಕು. ನಮ್ಮ ಸಮಾಜದಿಂದ ಕೋಟಿ ಗಾಯಿತ್ರಿ ಯಜ್ಞ ಹಮ್ಮಿಕೊಂಡಿದ್ದು ಪ್ರಾರಂಭದ ವರ್ಷದಲ್ಲೇ 3 ತಿಂಗಳಿಗೆ 1 ಕೋಟಿ ಗಾಯಿತ್ರಿ ಮಂತ್ರ ಹೇಳಿದ್ದರು. ಒಂದೇ ವರ್ಷದಲ್ಲಿ 3 ಕೋಟಿ ಗಾಯಿತ್ರಿ ಮಂತ್ರ ಜಪ ಮಾಡಲಾಗಿತ್ತು. ಗಾಯಿತ್ರಿ ಮಂತ್ರ ವೇದ ಅಧ್ಯಯನಕ್ಕೆ ಸಮನಾಗಿದೆ ಎಂದರು.

ಮಲೆನಾಡ ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯರಂಗ ಕೋಟೆ ತೋಟ ಉದ್ಘಾಟಿಸಿ ಮಾತನಾಡಿ ಈ ವರ್ಷದಿಂದ 500 ರು. ಇದ್ದ ನಿತ್ಯ ನಿಧಿಯನ್ನು 1000 ಕ್ಕೆ ಏರಿಸಿದ್ದೇವೆ. ಅನಾಯಾಸ ನಿಧಿ ಕಾರ್ಯಕ್ರಮ ನಡೆಯುತ್ತಿದೆ. ಸೆ. 17 ರಂದು ಶೃಂಗೇರಿಯಲ್ಲಿ ಗುರು ದರ್ಶನ ನಡೆಯಲಿದ್ದು ಸಮಾಜ ಬಾಂಧವರು ಭಾಗವಹಿಸಬೇಕು. ಶೃಂಗೇರಿ ಮಠದಲ್ಲಿ ಭಗವದ್ಗೀತೆ ಯಜ್ಞ ಪಾರಾಯಣ ನಡೆಸುತ್ತಿದೆ. 2 ವರ್ಷದಲ್ಲಿ 6 ವಿಭಾಗ ಮಾಡಿದ್ದು 18 ಅಧ್ಯಾಯ ಮುಗಿಸಬೇಕಾಗಿದೆ. ಇದರಿಂದ ಭಗವದ್ಗೀತೆ ಕಂಠ ಪಾಠವಾಗಲಿದೆ. ಕೋಟಿ ಗಾಯಿತ್ರಿ ಜಪ ಯಜ್ಞ ದಲ್ಲಿ ಮಕ್ಕಳು ಸಹ ಭಾಗವಹಿಸಬಹುದು. 1 ವರ್ಷದಲ್ಲಿ 75 ಸಾವಿರಕ್ಕಿಂತ ಹೆಚ್ಚು ಗಾಯಿತ್ರಿ ಜಪ ಮಾಡಿದವರಿಗೆ ಕೇಂದ್ರ ಸಮಿತಿಯಿಂದ ಗೌರವಿಸಲಾಗುವುದು ಎಂದರು.

ಸಮಾಜದ ಹಿರಿಯರಾದ ಕಾನೂರು ಸಾವಿತ್ರಮ್ಮ, ಹೊನ್ನೇಕೊಪ್ಪ ಹೇಮಾವತಿ ಹಾಗೂ ಸಮಾಜ ಸೇವೆ ಮಾಡಿದ ಬಾಳೆಹೊನ್ನೂರಿನ ಎಚ್.ಕೆ.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಉನ್ನತ ವ್ಯಾಸಂಗದಲ್ಲಿ ಶೇ. 70 ಕ್ಕಿಂತ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲೂಕು ಕಸಾಪದಿಂದ ಕನ್ನಡ ಸಿರಿ ಪ್ರಶಸ್ತಿ ಪಡೆದ ಯಡಗೆರೆ ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು. ಕೋಟಿ ಗಾಯಿತ್ರಿ ಯಜ್ಞದಲ್ಲಿ ಅತಿ ಹೆಚ್ಚು ಗಾಯಿತ್ರಿ ಮಂತ್ರ ಪಠಿಸಿದ ಕೇಶವಮೂರ್ತಿ ಹಾಗೂ ಎ.ಎಸ್.ವೆಂಕರಮಣ ಅವರನ್ನು ಗೌರವಿಸಲಾಯಿತು.

ಸಭೆ ಅಧ್ಯಕ್ಷತೆಯನ್ನು ಹೆಬ್ಬಾರ ಬ್ರಾಹ್ಮಣ ಸಭಾದ ಎನ್.ಆರ್.ಪುರ ಘಟಕದ ಅಧ್ಯಕ್ಷ ಎ.ವಿ.ಪ್ರಶಾಂತ್ ವಹಿಸಿದ್ದರು. ಅತಿಥಿಗಳಾಗಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ, ಎನ್.ಆರ್.ಪುರ ಘಟಕದ ಗೌರವಾಧ್ಯಕ್ಷ ಎ.ಎಸ್.ವೆಂಕಟರಮಣ, ಕಾರ್ಯದರ್ಶಿ ಕೆ.ವಿ. ಪ್ರಭಾಕರ, ಯುವ ಬಳಗದ ಅಧ್ಯಕ್ಷ ವೈ.ಎಂ.ಮಧು, ಕಾರ್ಯದರ್ಶಿ ಕೆ.ವಿ.ಪ್ರಭಾಕರ, ಖಜಾಂಚಿ ಕೆ.ಆರ್.ಶಿವಕುಮಾರ್, ಶಾರದಾ ವಿವಿಧೋದ್ದೇಶ ಸಹಕಾರ ಸಂಘದ ವ್ಯವಹಾರದ ಬಗ್ಗೆ ನಿರ್ದೇಶಕಿ ಸಂದ್ಯಾ ಶ್ರೀನಾಥ್ , ಸುಭಾಷ್, ದಿವ್ಯ ರಾಮಚಂದ್ರ ,ವಾಸವಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಬೆಳೆಸಲು ಶಾಲಾ ಸಂಸತ್ ಸಹಕಾರಿ
ಜೋಳ ಖರೀದಿಯ ಹಣ ಬಿಡುಗಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ