ಕೂದಲು ಉದುರಿದ್ರೆ ಕೌಟುಂಬಿಕ ದೌರ್ಜನ್ಯ ಹೇಗಾಗುತ್ತೆ?: ಹೈಕೋರ್ಟ್‌

KannadaprabhaNewsNetwork |  
Published : Jul 29, 2026, 02:00 AM IST
ಹೈಕೋರ್ಟ್‌ | Kannada Prabha

ಸಾರಾಂಶ

ದೋಸೆ, ರಾಗಿ ಮುದ್ದೆ ಮಾಡುವಂತೆ ಅತ್ತೆ ಕೇಳುವುದು. ಪತ್ನಿಯ ತಲೆ ಕೂದಲು ಉದುರುವುದು ಕೌಟುಂಬಿಕ ದೌರ್ಜನ್ಯ ಆಗುತ್ತದೆಯೇ ಎಂದು ಮಹಿಳೆಯೊಬ್ಬರಿಗೆ ಹೈಕೋರ್ಟ್‌ ಮಂಗಳವಾರ ಮೌಖಿಕವಾಗಿ ಪ್ರಶ್ನಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೋಸೆ, ರಾಗಿ ಮುದ್ದೆ ಮಾಡುವಂತೆ ಅತ್ತೆ ಕೇಳುವುದು. ಪತ್ನಿಯ ತಲೆ ಕೂದಲು ಉದುರುವುದು ಕೌಟುಂಬಿಕ ದೌರ್ಜನ್ಯ ಆಗುತ್ತದೆಯೇ ಎಂದು ಮಹಿಳೆಯೊಬ್ಬರಿಗೆ ಹೈಕೋರ್ಟ್‌ ಮಂಗಳವಾರ ಮೌಖಿಕವಾಗಿ ಪ್ರಶ್ನಿಸಿದೆ.

ಸೊಸೆ ನೀಡಿರುವ ದೂರಿನ ಅನ್ವಯ ಪೊಲೀಸರು ತಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 498ಎ ಅಡಿಯಲ್ಲಿ (ವಿವಾಹಿತ ಮಹಿಳೆಗೆ ಆಕೆಯ ಪತಿ ಅಥವಾ ಪತಿಯ ಸಂಬಂಧಿಕರಿಂದ ವರದಕ್ಷಿಣೆ ಕಿರುಕುಳ, ದೈಹಿಕ ಅಥವಾ ಮಾನಸಿಕ ಹಿಂಸೆಯನ್ನು ನೀಡುವುದು) ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅತ್ತೆ ಮತ್ತು ಆಕೆಯ ಸಂಬಂಧಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ನಡೆಸಿತು.

ವಿಚಾರಣೆ ವೇಳೆ ಪ್ರಕರಣದ ದೂರುದಾರೆಯಾದ ಅರ್ಜಿದಾರರ ಸೊಸೆ ಸ್ವತಃ ತಾವೇ ನ್ಯಾಯಾಲಯದ ಮುಂದೆ ಹಾಜರಾಗಿ, ಪತಿಯ ಮನೆಯ ಕಡೆಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ನನಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಲ್ಲ, ಪ್ರತಿದಿನ ದೋಸೆ, ಅನ್ನ, ಸೊಪ್ಪು ಮತ್ತು ಬೇಳೆ ಸಾರು ನೀಡುತ್ತಿದ್ದರು. ಆದರೆ, ಅವರು ಮಾತ್ರ ದಿನ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುತ್ತಿದ್ದರು. ನನ್ನ ಮೇಲಿನ ದೌರ್ಜನ್ಯದಿಂದಾಗಿ ನನಗೆ ತಲೆಕೂದಲು ಉದುರಿದೆ. ಅಡುಗೆ ಮನೆಗೆ ಹೋಗಲು ಅತ್ತೆ ನನ್ನನ್ನು ಬಿಡುತ್ತಿರಲಿಲ್ಲ. ನನಗೆ ಬರುತ್ತಿದ್ದ ಸಂಬಳವನ್ನೆಲ್ಲಾ ಪತಿಗೆ ನೀಡುತ್ತಿದ್ದು, ಖರ್ಚಿಗೆ ಏನೂ ಉಳಿಯುತ್ತಿರಲಿಲ್ಲ. ಪತಿಯನ್ನು ತನ್ನ ಕೊಠಡಿಯಲ್ಲಿಯೇ ಮಲಗುವಂತೆ ಅತ್ತೆ ಮಾಡಿದ್ದಳು. ನಾನು ನನ್ನ ಕೊಠಡಿಯಲ್ಲಿ ಏಕಾಂಗಿಯಾಗಿದ್ದೆ. ಐದೂವರೆ ತಿಂಗಳು ಈ ದುರಂತಮಯ ಬದುಕು ಅನುಭವಿಸಿ, ಪತಿಯ ಮನೆಯಿಂದ ಹೊರಬೀಳಬೇಕಾಯಿತು ಎಂದರು.

ಆಗ ಪೀಠ, ಉಸಿರುಗಟ್ಟಿಸುವ ಅತ್ತೆ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ನೀವು ದೂರಿನಲ್ಲಿ ಹೇಳಿದ್ದೀರಿ. ಪತಿ ಊಟ ಮಾಡುವವರೆಗೆ ನನ್ನನ್ನು ಊಟ ಮಾಡಲು ಬಿಡುತ್ತಿರಲಿಲ್ಲ. ಪತಿಗೆ ಬಿಸಿ ದೋಸೆ, ಪತಿ ಬೆಳಗ್ಗೆ 10 ಗಂಟೆಗೆ ತಿಂಡಿ ತಿಂದ ಬಳಿಕ ನಾನು ತಿಂಡಿ ತಿನ್ನಬೇಕಿತ್ತು ಎಂದು ಹೇಳಿದ್ದೀರಿ. ಇದನ್ನು ಆಧರಿಸಿ ಐಪಿಸಿ ಸೆಕ್ಷನ್‌ 498ಎ ಅಡಿ ಪ್ರಕರಣವನ್ನು ಅನ್ವಯಿಸಬಹುದೇ ಎಂದು ಕಟುವಾಗಿ ಪ್ರಶ್ನಿಸಿತು.

ದೂರದಾರೆಯು ಉತ್ತರಿಸಿ, ನನ್ನ ತಾಯಿ ಮನೆ ಬಳಿ ಬಂದು ರಸ್ತೆಯಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ಅರ್ಜಿದಾರರು ನಿಂದಿಸಿದ್ದಾರೆ. ನನ್ನ ಘನತೆಯನ್ನು ಪ್ರಶ್ನಿಸಿದ್ದಾರೆ. ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆ ಎಂದು ನಿಂದಿಸಿದ್ದಾರೆ. ಇದರಿಂದ ನೆರೆಹೊರೆಯವರು ನನ್ನನ್ನು ಏನೆಂದು ಕೊಳ್ಳಬೇಡ. ಹೀಗಾಗಿ, ಅವರ ವಿರುದ್ಧ ಮಾನಹಾನಿ ಪ್ರಕರಣವನ್ನೂ ದಾಖಲಿಸಿದ್ದೇನೆ ಎಂದು ಸಮರ್ಥಸಿಕೊಂಡರು.

ಆಗ ನ್ಯಾಯಪೀಠ, ಪತಿಗೆ ರಾಗಿ ಮುದ್ದೆ ಮಾಡಿಕೊಡಿ ಎಂದು ಅತ್ತೆ ಹೇಳುವುದು ತಪ್ಪೇ? ನಿಮ್ಮ ತಲೆಕೂದಲು ಉದುರಿದ್ದಕ್ಕೆ ಐಪಿಸಿ ಸೆಕ್ಷನ್‌ 498ಎ? ನಿಮಗೆ ತಲೆ ಕೂದಲು ಉದುರುವುದು, ಪತಿಗೆ ದೋಸೆ, ರಾಗಿ ಮುದ್ದೆ ಮಾಡಿಕೊಡಿ ಎಂದು ಹೇಳುವುದು, ನಿಮಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಿಲ್ಲ ಎಂಬುದು ವರದಕ್ಷಿಣೆ ಕಿರುಕುಳವೇ? ಕೆಲವೊಂದು ಆರೋಪಗಳನ್ನು ಕ್ರೌರ್ಯಕ್ಕೆ ಸಮನಾಗಿಸಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು.

ಅಲ್ಲದೇ, ದೂರುದಾರೆಯ ದೃಷ್ಟಿಯಲ್ಲಿನ ಕ್ರೌರ್ಯವು ಕ್ರೌರ್ಯವಲ್ಲ. ಕಾನೂನಿನ ಅಡಿ ಕ್ರೌರ್ಯ ಮಾತ್ರ ಕ್ರೌರ್ಯವಾಗುತ್ತದೆ. ಎಲ್ಲ ಅಹವಾಲುಗಳನ್ನು ಕ್ರೌರ್ಯಕ್ಕೆ ಹೋಲಿಕೆ ಮಾಡಲಾಗದು. ನೀವಿಬ್ಬರೂ ಪರಸ್ಪರ ದೂರು-ಪ್ರತಿದೂರು ದಾಖಲಿಸುವುದು ಕ್ರೌರ್ಯವಲ್ಲ ಎಂದು ಹೇಳಿತು.

ಅರ್ಜಿದಾರರ ಪರ ವಕೀಲರು, ಅತ್ತೆ ಮತ್ತು ಆಕೆಯ ಇಬ್ಬರು ಸಹೋದರರು ಮತ್ತು ಪತಿಯ ಸ್ನೇಹಿತನ ವಿರುದ್ಧ ಪತ್ನಿ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಲಾಗಿದೆ. ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪತಿ ಈಗಾಗಲೇ ಹಿಂಪಡೆದಿದ್ದಾರೆ. ಪ್ರಕರಣ ಎಫ್‌ಐಆರ್‌ ಹಂತದಲ್ಲಿದೆ ಎಂದು ತಿಳಿಸಿದರು.

ಅಂತಿಮವಾಗಿ ಅರ್ಜಿಯಲ್ಲಿ ಎಲ್ಲ‌ ಪಕ್ಷಕಾರರ ವಾದ-ಪ್ರತಿವಾದ ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಬೆಳೆಸಲು ಶಾಲಾ ಸಂಸತ್ ಸಹಕಾರಿ
ಜೋಳ ಖರೀದಿಯ ಹಣ ಬಿಡುಗಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ