ಶೃಂಗೇರಿ ಬಸ್ ನಿಲ್ದಾಣದ ಅವ್ಯವಸ್ಥೆ: ಪ್ರಯಾಣಿಕರಿಗೆ ಪರದಾಟ

KannadaprabhaNewsNetwork |  
Published : Jan 06, 2026, 02:15 AM IST
ೇ್ | Kannada Prabha

ಸಾರಾಂಶ

ಶೃಂಗೇರಿಪಟ್ಟಣದ ಕುವೆಂಪು ಬಸ್ ನಿಲ್ದಾಣ ಪ್ರಯಾಣಿಕ ಸ್ನೇಹಿಯಾಗುವುದಿರಲಿ ಕನಿಷ್ಟ ವ್ಯವಸ್ಥೆಗಳು ಇಲ್ಲದೆ ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕರು ಅವ್ಯವಸ್ಥೆಗಳನ್ನು ಸಹಿಸುತ್ತಲೇ ಪ್ರಯಾಣ ಬೆಳೆಸಬೇಕಾದ ದುಸ್ಥಿತಿಯಲ್ಲಿದೆ.

ಮಿತಿಮೀರಿದ ಖಾಸಾಗಿ ವಾಹನ ನಿಲುಗಡೆ ।

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪಟ್ಟಣದ ಕುವೆಂಪು ಬಸ್ ನಿಲ್ದಾಣ ಪ್ರಯಾಣಿಕ ಸ್ನೇಹಿಯಾಗುವುದಿರಲಿ ಕನಿಷ್ಟ ವ್ಯವಸ್ಥೆಗಳು ಇಲ್ಲದೆ ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕರು ಅವ್ಯವಸ್ಥೆಗಳನ್ನು ಸಹಿಸುತ್ತಲೇ ಪ್ರಯಾಣ ಬೆಳೆಸಬೇಕಾದ ದುಸ್ಥಿತಿಯಲ್ಲಿದೆ.

ಸ್ವಚ್ಛವಿಲ್ಲದ ಚರಂಡಿಯಿಂದ ಇಡೀ ವಾತಾವರಣದಲ್ಲಿ ದುರ್ನಾತ, ಎಲ್ಲೆಂದರಲ್ಲಿ ಕಸದ ರಾಶಿ, ಬಸ್ ನಿಲ್ದಾಣದೊಳಗೆ ಕಬ್ಬಿಣದ ಪೈಪ್‌ಗಳನ್ನು ಗುಡ್ಡೆ ಹಾಕಲಾಗಿದೆ. ಎಲ್ಲೂ ನಾಮಫಲಕವಿಲ್ಲ. ಒಟ್ಟಾರೆ ಇಂತಹ ಅವ್ಯವಸ್ಥೆಗಳ ಸರಮಾಲೆಗಳನ್ನು ಹೇಳುತ್ತಿದ್ದರೆ ಮುಗಿಯುವುದೇ ಇಲ್ಲ.

ಖಾಸಗಿ ವಾಹನ ತಂಗುದಾಣವೋ, ಬಸ್ ನಿಲ್ದಾಣವೋ ಎಂದು ಅನುಮಾನ ಹುಟ್ಟಿಸುವಂತಿದೆ. ಶೃಂಗೇರಿ ಬಸ್ ನಿಲ್ದಾಣಕ್ಕೆ ಬರುವ ಎಲ್ಲಾ ಖಾಸಗಿ ಬಸ್ ಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ ಯಾವುದೇ ಸಮಯದ ಪರಿವೆ ಇಲ್ಲದೆ ಶೃಂಗೇರಿ ಬಸ್ ನಿಲ್ದಾಣದೊಳಗೆ ದ್ವಿಚಕ್ರ ವಾಹನಗಳು, ಕಾರ್, ಆಟೋ ರಿಕ್ಷಾ, ಪಿಕಪ್ ಸೇರಿದಂತೆ ಖಾಸಗಿ ವಾಹನಗಳು ದಿನಗಟ್ಟಲೇ ನಿಂತಿರುತ್ತದೆ. ನಿಲ್ದಾಣದೊಳಗೂ ಸಾಲಾಗಿ ಇಲ್ಲದ ಕಾರ್, ಬೈಕ್ ಗಳು ಎಗ್ಗಿಲ್ಲದೇ ಸ್ಥಳ ಆಕ್ರಮಿಸಿ ಬಸ್ ನಿಲುಗಡೆಗೆ ಸ್ಥಳವೇ ಇಲ್ಲದಂತಾಗಿದೆ. ಬಹಳಷ್ಟು ಬಾರಿ ಬಸ್ ಗಳು ಹಿಂದೆ ಮುಂದೆ ಚಲಿಸಲು, ತಿರುಗಿಸಲು ಕಷ್ಟವಾಗಿ ಚಾಲಕರು ಹರಸಾಹಸ ಪಡುವಂತಾಗುತ್ತದೆ.

ಕೆಲ ಅಂಗಡಿ ಮಳಿಗೆಗಳು ನಿಯಮ ಮೀರಿ ರಸ್ತೆಯಲ್ಲಿಯೇ ಜಾಹಿರಾತು ಬೋರ್ಡ್ ಗಳು, ಅಂಗಡಿಯವರು ರಸ್ತೆಗೆ ಛಾವಣಿ ಹಾಕಿರುವುದರಿಂದ ಬಸ್ ಚಲಿಸಲು ಅಡ್ಡಿಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ಅನೇಕ ಬಾರಿ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ದಿವ್ಯ ನಿರ್ಲಕ್ಷ ವಹಿಸುತ್ತಿದ್ದಾರೆ.

ಹೀಗಾಗಿ ಇದು ಬಸ್ ನಿಲ್ದಾಣವೋ ..ಖಾಸಗಿ ವಾಹನಗಳ ತಂಗುದಾಣವೋ ಎಂಬ ಗೊಂದಲ ಜನರಲ್ಲಿ ಮೂಡಿಸುತ್ತಿದೆ. ಶಾಲಾ ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರಿಗೆ ಬಸ್ ನಿಲ್ದಾಣದೊಳಗೆ ಓಡಾಡಲು ಸಾಕಷ್ಟು ತೊಂದರೆ ಉಂಟಾಗುತ್ತಿದೆ.

ಈ ಬಗ್ಗೆ ಸ್ಥಳೀಯರಾದ ಅನಂತಮೂರ್ತಿ, ನಾಗರಾಜ್ ಮತ್ತಿತರರು ಪತ್ರಿಕೆಯೊಂದಿಗೆ ಮಾತನಾಡಿ ಇಲ್ಲಿ ಖಾಸಗಿ ವಾಹನಗಳ ನಿಲುಗಡೆ ಸಂಖ್ಯೆ ಹೆಚ್ಚುತ್ತಿದೆ. ಬಸ್ ಗಳು ನಿಲ್ಲಲು, ಸಂಚರಿಸಲು ಕಷ್ಟವಾಗುತ್ತಿದೆ. ಇತರೆ ಕಡೆಗಳಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ಗಳನ್ನು ಹೊರತು ಪಡಿಸಿ ಇತರೆ ಯಾವುದೇ ಖಾಸಗಿ ವಾಹನಗಳ ಪ್ರವೇಶ, ನಿಲುಗಡೆ ನಿಷೇಧವಿದೆ. ಆದರೆ ಶೃಂಗೇರಿ ನಿಲ್ದಾಣ ಇದಕ್ಕೆ ತದ್ವಿರುದ್ದ. ಛಾವಣಿಗಳು, ಜಾಹಿರಾತು ಬೋರ್ಡಗಳು ನಿಯಮ ಮೀರಿ ಹಾಕಿರುವುದರಿಂದ ಬಸ್ ತಿರುಗಿಸಲು, ನಿಲ್ಲಿಸಲು ತೊಂದರೆಯಾಗುತ್ತಿದೆ. ಸಂಬಂಧ ಪಟ್ಟ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ನಾವು ಈ ಬಗ್ಗೆ ಈಗಾಗಲೇ ತಹಸೀ ಲ್ದಾರ್, ಜಿಲ್ಲಾಧಿಕಾ ರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕ್ಕೆ ಬರೆಯಲಾಗಿದೆ. ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬಸ್ ನಿಲ್ದಾಣ ಬಸ್ ನಿಲುಗಡೆ, ಸಂಚಾರ, ಪ್ರಯಾಣಿಕರ ಅನುಕೂಲಕ್ಕೆ ಮುಕ್ತವಾಗಿರಬೇಕು. ಇತರೆ ಯಾವುದೇ ಖಾಸಗಿ ವಾಹನಗಳ ಸಂಚಾರ, ನಿಲುಗಡೆಗೆ ನಿಷೇಧವಿರಬೇಕು. ಪ್ರಯಾಣಿಕರ ಸುರಕ್ಷತೆ ಮುಖ್ಯ. ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾ ಯಿತಿ ಬಸ್ ನಿಲ್ದಾಣದೊಳಗೆ ಹಾಕಿರುವ ಪೈಪ್ ರಾಶಿಯನ್ನು, ಮಳಿಗೆಗಳ ಮುಂದೆ ನಿಯಮ ಮೀರಿ ಹಾಕಿರುವ ಜಾಹಿರಾತು ಬೋರ್ಡಗಳನ್ನು, ಹೆಚ್ಚುವರಿ ಛಾವಣಿಗಳನ್ನುತೆರವುಗೊಳಿಸಿ, ಇತರೆ ಎಲ್ಲಾ ಖಾಸಗಿ ವಾಹನಗಳ ಪ್ರವೇಶ, ನಿಲುಗಡೆ ನಿಷೇಧಿಸಿ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯ.

3 ಶ್ರೀ ಚಿತ್ರ 1,ಮತ್ತು 2-

ಶೃಂಗೇರಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ನಿಂತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ