ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆರಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ಅಳವಡಿಸಲಾಗಿದ್ದ ಹನುಮ ಧ್ವಜ ಕೆಳಗಿಳಿಸಿ, ರಾಷ್ಟ್ರಧ್ವಜ ಹಾರಿಸಿದ ತಾಲೂಕು ಅಧಿಕಾರಿಗಳ ಕ್ರಮ ಭಾರಿ ಸಂಘರ್ಷಕ್ಕೆ ಕಾರಣವಾಗಿದೆ. ಹನುಮ ಧ್ವಜ ತೆರವುಗೊಳಿಸಿದ ತಾಲೂಕು ಆಡಳಿತ ಹಾಗೂ ಜಿಲ್ಲಾ ಪೊಲೀಸರ ವಿರುದ್ಧ ಸಿಟ್ಟಿಗೆದ್ದಿರುವ ಗ್ರಾಮಸ್ಥರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ಭದ್ರಕೋಟೆಯನ್ನು ಭೇದಿಸಿ ಜನರು ಧ್ವಜ ಹಾರಿಸಲು ಮುಂದಾದಾಗ ಲಾಠಿ ಪ್ರಹಾರ ನಡೆಸಲಾಗಿದ್ದು, ಪರಿಸ್ಥಿತಿ ಉದ್ರಿಕ್ತಗೊಂಡಿದೆ.ಇದರ ಬೆನ್ನಲ್ಲೇ ಕೆರಗೋಡು ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಈ ಮಧ್ಯೆ, ಘಟನೆ ಖಂಡಿಸಿ ಸೋಮವಾರ ಕೆರಗೋಡು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಫೆ.9ರಂದು ಮಂಡ್ಯ ನಗರ ಬಂದ್‌ಗೆ ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿವೆ. ಜನರ ಹೋರಾಟಕ್ಕೆ ಜೆಡಿಎಸ್- ಬಿಜೆಪಿ ಬೆಂಬಲ ಘೋಷಣೆ ಮಾಡಿರುವುದರಿಂದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.ಈ ನಡುವೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ಭಾನುವಾರ ಕೆರಗೋಡಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹನುಮಧ್ವಜ ಹಾರಿಸುವ ಉದ್ದೇಶದಿಂದ ಪೊಲೀಸ್ ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗಿದಾಗ ಅಶೋಕ್ ಸೇರಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ.
ವಿವಾದವೇನು?:ಜ.22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಿಮಿತ್ತ ಕೆರಗೋಡು ಗ್ರಾಮದ ಆಂಜನೇಯ ದೇಗುಲದ ಎದುರಿನ ರಂಗಮಂದಿರದ ಆವರಣದಲ್ಲಿನ ಸರ್ಕಾರಿ ಜಾಗದಲ್ಲಿ 108 ಅಡಿ ಎತ್ತರದ ಆಂಜನೇಯ-ಅರ್ಜುನ ಧ್ವಜಸ್ತಂಭ ಉದ್ಘಾಟಿಸಲಾಗಿತ್ತು. ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸಲಾಗಿತ್ತು. ಇದಕ್ಕೆ ಗ್ರಾ.ಪಂ.ನ ಅನುಮತಿ ಪಡೆಯಲಾಗಿತ್ತು. ಜ.26ರಂದು ಗಣರಾಜ್ಯೋತ್ಸವ ನಿಮಿತ್ತ ಹನುಮಧ್ವಜ ಕೆಳಗಿಳಿಸಿ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಸಂಜೆ ರಾಷ್ಟ್ರಧ್ವಜ ತೆರವು ಮಾಡಿ, ಮತ್ತೆ ಹನುಮಧ್ವಜ ಹಾರಿಸಲಾಗಿತ್ತು.
ಈ ಮಧ್ಯೆ, ಸರ್ಕಾರಿ ಜಾಗದಲ್ಲಿ ಹನುಮಧ್ವಜ ಹಾರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ತಾ.ಪಂ. ಇಓಗೆ ಕೆಲವರು ದೂರು ನೀಡಿದ್ದರು. ಈ ದೂರಿನನ್ವಯ ಶನಿವಾರ ತಾ.ಪಂ. ಇಓ ವೀಣಾ ಸ್ಥಳ ಪರಿಶೀಲನೆ ನಡೆಸಿ, ಧ್ವಜ ತೆರವಿಗೆ ಸೂಚನೆ ನೀಡಿದರು. ಭಾನುವಾರ ಮುಂಜಾನೆ 3 ಗಂಟೆ ವೇಳೆಗೆ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಹನುಮ ಧ್ವಜ ಇಳಿಸಿ, ರಾಷ್ಟ್ರಧ್ವಜ ಹಾರಿಸಿದರು. ಈ ವೇಳೆ, ಗ್ರಾಮಸ್ಥರು ಆಗಮಿಸಿ, ಅಡ್ಡಿಪಡಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸಿದರು. ಎಸ್ಪಿ ಯತೀಶ್ ಅವರು ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿದರು. ಘಟನೆ ಖಂಡಿಸಿ ಕೆರಗೋಡು ಬಂದ್ ನಡೆಸಲಾಯಿತು.ಈ ಮಧ್ಯೆ, ಮಧ್ಯಾಹ್ನ 2 ಗಂಟೆ ವೇಳೆಗೆ ಗ್ರಾಮಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಅಶ್ವತ್ಥ್ ನಾರಾಯಣ ಆಗಮಿಸಿ, ಪ್ರತಿಭಟನೆಗೆ ಸಾಥ್ ನೀಡಿದರು. ಧ್ವಜಸ್ತಂಭದ ಸುತ್ತ ಹಾಕಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ, ಹನುಮಧ್ವಜ ಹಾರಿಸಲು ಮುಂದಾದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಪೊಲೀಸರು ಅವರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.ಎಲ್ಲ ಜಿಲ್ಲೆಗಳಲ್ಲಿಂದು ಬಿಜೆಪಿ ಪ್ರತಿಭಟನೆರಾಯಚೂರು/ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡುವಿನಲ್ಲಿ ಹನುಮಧ್ವಜ ತೆರವು ಖಂಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.ಕೋಮುಗಲಭೆಗೆ ಬಿಜೆಪಿ ಸಂಚುಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮದಲ್ಲಿನ ಘಟನೆ ಬಿಜೆಪಿ ಹಾಗೂ ಸಂಘ ಪರಿವಾರದ ಪೂರ್ವ ನಿಯೋಜಿತ ಕೃತ್ಯ. ಬಿಜೆಪಿ ನಾಯಕರು ಮಂಡ್ಯದಲ್ಲಿ ಕೋಮುಗಲಭೆ ಎಬ್ಬಿಸುವ ಸಂಚು ರೂಪಿಸಿರುವುದು ಲೋಕಸಭಾ ಚುನಾವಣೆಗೆ ನಡೆಸಿರುವ ತಯಾರಿ ಎಂಬುದರಲ್ಲಿ ಅನುಮಾನವೇ ಇಲ್ಲ.- ಸಿದ್ದರಾಮಯ್ಯ ಮುಖ್ಯಮಂತ್ರಿ