ಜೇಕಿನಕಟ್ಟಿ ಗ್ರಾಮದಲ್ಲಿ ಮಹಿಳೆಯರ ದೇಣಿಗೆ ಹಣದಲ್ಲಿ ರಥ ನಿರ್ಮಾಣ

KannadaprabhaNewsNetwork |  
Published : Oct 01, 2025, 01:01 AM IST
ಫೋಟೊ ಶೀರ್ಷಿಕೆ: 30ಹೆಚ್‌ವಿಆರ್1ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಂಡ ಶ್ರೀ ಉಡಚಮ್ಮದೇವಿಯ ರಥ  | Kannada Prabha

ಸಾರಾಂಶ

ಜಿಲ್ಲೆಯ ಸವಣೂರ ತಾಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿ ಮಹಿಳೆಯರ ದೇಣಿಗೆಯ ಹಣದಲ್ಲಿ ನೂತನವಾಗಿ ಗ್ರಾಮದ ಉಡಚಮ್ಮದೇವಿಯ ರಥ ನಿರ್ಮಾಣವಾಗಿದ್ದು, ಅ. 2ರಂದು ವಿಜಯದಶಮಿ ಹಬ್ಬದಂದು ರಥ ಲೋಕಾರ್ಪಣೆಗೊಳ್ಳಲಿದೆ.

ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿ ಮಹಿಳೆಯರ ದೇಣಿಗೆಯ ಹಣದಲ್ಲಿ ನೂತನವಾಗಿ ಗ್ರಾಮದ ಉಡಚಮ್ಮದೇವಿಯ ರಥ ನಿರ್ಮಾಣವಾಗಿದ್ದು, ಅ. 2ರಂದು ವಿಜಯದಶಮಿ ಹಬ್ಬದಂದು ರಥ ಲೋಕಾರ್ಪಣೆಗೊಳ್ಳಲಿದೆ.ಗ್ರಾಮದ ಶ್ರೀ ಹುತ್ತಮಲ್ಲೇಶ್ವರ ಜೀರ್ಣೋದ್ಧಾರ ಕಮಿಟಿ ಆಶ್ರಯದಲ್ಲಿ ಸುಮಾರು 16 ವರ್ಷಗಳಿಂದ ಗ್ರಾಮದೇವತೆ ಉಡಚಮ್ಮದೇವಿಯ ದೇವಸ್ಥಾನ ಆವರಣದಲ್ಲಿ ಪ್ರತಿವರ್ಷ ದೇವಿಯ ಪುರಾಣ ಪ್ರವಚನ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವರ್ಷ ಅದರ ಅಂಗವಾಗಿ ರಥೋತ್ಸವ ನಡೆಯುತ್ತಿರುವುದು ವಿಶೇಷವಾಗಿದೆ.ಮಹಿಳೆಯರ ದೇಣಿಗೆ: ಗ್ರಾಮದ ನೂರಾರು ಮಹಿಳೆಯರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ದೇಣಿಗೆ ನೀಡುವ ಮೂಲಕ ರಥ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಈ ರಥ ನಿರ್ಮಾಣಕ್ಕೆ ಸುಮಾರು ರು. 10 ಲಕ್ಷ ವೆಚ್ಚವಾಗಿದ್ದು ಗ್ರಾಮದ ಪ್ರತಿಯೊಂದು ಮನೆಯಿಂದ ಹೆಣ್ಣುಮಕ್ಕಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಹೀಗಾಗಿ ಟ್ರಸ್ಟ್ ಕಮಿಟಿಯಿಂದಲೂ ಮಹಿಳೆಯರ ಹೆಸರಿನಲ್ಲಿಯೇ ರಶೀದಿ ನೀಡಲಾಗುತ್ತಿದೆ. ಗ್ರಾಮದಿಂದ ಪರಸ್ಥಳಕ್ಕೆ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳು ಸಹ ದೇಣಿಗೆ ನೀಡಿದ್ದಾರೆ.ಮಹಿಳೆಯರಿಂದಲೇ ರಥೋತ್ಸವ:ಈಗಾಗಲೇ ಪ್ರತಿವರ್ಷ ದವನದ ಹುಣ್ಣಿಮೆಯ ಅಂಗವಾಗಿ ಗ್ರಾಮದ ಹುತ್ತಮಲ್ಲೇಶ್ವರ ಜಾತ್ರೆಯಲ್ಲಿ ಮೊದಲ ದಿನ ಪುರುಷರು ಹುತ್ತಮಲ್ಲೇಶ್ವರ ರಥವನ್ನು ಎಳೆಯುತ್ತಾರೆ. ಎರಡನೇಯ ದಿನ ನಡೆಯುವ ಅಕ್ಕಮಹಾದೇವಿಯ ರಥವನ್ನು ಮಹಿಳೆಯರೇ ಎಳೆಯುವುದು ವಾಡಿಕೆಯಿದೆ. ಹೀಗಾಗಿ ಮಹಿಳೆಯರಿಂದ ದೇಣಿಗೆ ಪಡೆದು ಹೊಸದಾಗಿ ನಿರ್ಮಾಣಗೊಂಡ ಈ ಉಡಚಮ್ಮದೇವಿಯ ರಥವನ್ನು ಮಹಿಳೆಯರು ಎಳೆಯುವುದು ವಿಶೇಷವಾಗಿದೆ.ಅ. 2ರಂದು ಲೋಕಾರ್ಪಣೆ:ನೂತನ ರಥೋತ್ಸವ ಅ. 2ರಂದು ಲೋಕಾರ್ಪಣೆಗೊಳ್ಳಲಿದೆ. ಮಂತ್ರವಾಡಿ ಸಿದ್ದರಾಮೇಶ್ವರ ಶಿವಾಚಾರ್ಯರು, ಶಿಗ್ಗಾಂವ ತಾಲೂಕು ಹೋತನಹಳ್ಳಿ ಸಿಂದಗಿ ಶಾಖಾಮಠದ ಶಂಭುಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಈಗಾಗಲೇ ನವರಾತ್ರಿ ಅಂಗವಾಗಿ ಹಾನಗಲ್ಲ ತಾಲೂಕಿನ ಎಲಿವಾಳ ಗ್ರಾಮದ ಗುರುಪಾದಯ್ಯ ಶಾಸ್ತ್ರಿ, ಎಸ್. ಹಿರೇಮಠ ಅವರಿಂದ ದೇವಿಯ ಪುರಾಣ ಪ್ರವಚನ ನಡೆದಿದ್ದು, ಅ. 2ರಂದು ಮಹಾಮಂಗಲವಾಗಲಿದೆ ಎಂದು ಟ್ರಸ್ಟ್ ಕಮಿಟಿ ತಿಳಿಸಿದೆ.ನಮ್ಮ ಗ್ರಾಮದೇವತೆ ಉಡಚಡಮ್ಮ ದೇವಿಯ ಮಹಾರಥೋತ್ಸವ ನಡೆಯುತ್ತಿರುವುದು ಬಹಳಷ್ಟು ಸಂತಸ ತಂದಿದೆ. ಪ್ರತಿ ವರ್ಷ ಮಹಾಪುರಾಣ ಪ್ರವಚನ ಆಲಿಸಲಾಗುತ್ತಿತ್ತು. ಆದರೆ ಈ ವರ್ಷದಿಂದ ದೇವಿಯ ರಥೋತ್ಸವ ಜರುಗುತ್ತಿರುವುದು ನಮ್ಮ ಪುಣ್ಯ. ಸ್ವಯಂ ಪ್ರೇರಣೆಯಿಂದ ಗ್ರಾಮದ ಮಹಿಳೆಯರು ಒಗ್ಗೂಡಿಕೊಂಡು ದೇಣಿಗೆ ನೀಡಿದ್ದೇವೆ ಎಂದು ಸುಶೀಲಾ ಮಹಾಂತಶೆಟ್ಟರ ಹೇಳಿದರು.

PREV

Recommended Stories

ಇಂದಿನಿಂದ ಮಹಿಳಾ ಏಕದಿನ ವಿಶ್ವಕಪ್‌ : 8 ತಂಡ, 31 ಪಂದ್ಯ
ಅಕ್ರಮ ತಡೆಗೆ ‘ಡಿಜಿಟಲ್‌’ ಭೂಸ್ವಾಧೀನ: ಬೈರೇಗೌಡ