ಬಳ್ಳಾರಿ: ಸ್ವಂತದ ದುಡಿಮೆಯಿಂದ ಮಾಡಿದ ದಾನ-ಧರ್ಮ, ಸೇವೆಗಳು ಸದಾಕಾಲ ಶ್ರೇಷ್ಠವಾಗಿರುತ್ತವೆ ಎಂದು ಬಳಗಾನೂರು ಸುಕ್ಷೇತ್ರದ ಶಿವಶಾಂತವೀರ ಶರಣರು ಹೇಳಿದರು.
ಪರರನ್ನು ವಂಚಿಸದೇ ಸ್ವಂತದ ದುಡಿಮೆಯಿಂದ- ಸ್ವ ಶ್ರಮದಿಂದ ಮಾಡಿದ ಸಂಪಾದನೆಯಿಂದ ಆ ಕುಟುಂಬದಲ್ಲಿ ಸದಾಕಾಲ ಆಹ್ಲಾದಕರ ವಾತಾವರಣ ಇರಲಿದೆ. ಗೃಹಿಣಿಯ ಶಾಂತಿ-ಸಹನೆ ಸಮಾಜಕ್ಕೆ ಶ್ರೀರಕ್ಷೆಯಿದ್ದಂತೆ. ಕುಟುಂಬದಲ್ಲಿ ಶಾಂತಿ - ನೆಮ್ಮದಿ ಮತ್ತು ಸಂತೋಷಗಳು ನೆಲೆಸಿ ಕುಟುಂಬವು ಸಂತೃಪ್ತವಾಗಿರಲು ಗೃಹಿಣಿಯ ಕಾರ್ಯ ಅನನ್ಯವಾದದ್ದು ಎಂದರು.
ಈ ಲೋಕದಲ್ಲಿ ಪಡೆದ ಅಲೌಕಿಕ ಅನುಭವಗಳ ಮೂಲಕ ಸಮಾಜದಲ್ಲಿ ಕಾಯಕತತ್ವ ಮತ್ತು ಕಾಯಕಯೋಗಿಯಾಗಿ ಜೀವಿಸಿದವರು ಚನ್ನವೀರ ಶರಣರು. ನುಡಿದಂತೆ ನಡೆದವರು, ನಡೆದಂತೆ ನುಡಿದವರು ಚನ್ನವೀರ ಶರಣರು. ಕಾಯಕದ ಮೂಲಕ ಕೈವಲ್ಯವನ್ನು ಸಾಧಿಸಿದವರು ಎಂದು ತಿಳಿಸಿದರು.ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹರ್ಲಾಪುರದ ಕೊಟ್ಟೂರೇಶ್ವರ ಮಠದ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಚನ್ನವೀರ ಶರಣರ ನಾಮಸ್ಮರಣೆಯಿಂದ ಪುಣ್ಯ ಪ್ರಾಪ್ತಿಯಾಗಲಿದೆ. ಸತ್ ಚಿಂತನೆಯಿಂದ ಜೀವನ ಪಾವನವಾಗಲಿದೆ. ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ನಾಡಿನ ಒಳಿತನ್ನು ಬಯಸುವ ಆಧ್ಯಾತ್ಮ ಶಕ್ತಿ ಹೆಚ್ಚಲಿದೆ ಎಂದರು.
ಚನ್ನವೀರ ಶರಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕೊತ್ತಲಚಿಂತೆಯ ಶರಣಕುಮಾರ್ ಪ್ರಾರ್ಥನೆ ಸಲ್ಲಿಸಿದರು. ಸುಧಾಕರ ತಬಲಾ ಸಾಥ್ ನೀಡಿದರು.
13ಕ್ಕೂ ಹೆಚ್ಚಿನ ಭಕ್ತರು ಕುಟುಂಬ ಸಮೇತರಾಗಿ ಶಿವಶಾಂತವೀರ ಶರಣರ ತುಲಾಭಾರ ಸೇವೆ ನೆರವೇರಿಸಿ, ಭಕ್ತಿಯನ್ನು ಸಮರ್ಪಿಸಿದರು.
ಸಿದ್ಧಾಂತ ಶಿಖಾಮಣಿ ಪಠಣ ಸಮಿತಿಯ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿದ್ಧಾಂತ ಶಿಖಾಮಣಿಯನ್ನು ಪಠಣ ಮಾಡಿದರು.