ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ತಾಲೂಕಿನ ತುರಮರಿ ಗ್ರಾಮದ ಹೊರ ವಲಯದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ ತೆರವಿಗೆ ಆಗ್ರಹಿಸಿ ಬೆಳಗಾವಿ ನಗರದಲ್ಲಿ ಶುಕ್ರವಾರ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಸರ್ದಾರ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ತುರಮರಿ, ಉಚಗಾಂವ, ಬಾಚಿ, ಕೋಣೆವಾಡಿ, ಸುಳಗಾ, ಗೋಜಗಾ, ಮಣ್ಣೂರ, ಕಲ್ಲೆಹೋಳ, ಅಂಬೇವಾಡಿ ಗ್ರಾಮಗಳ ಜನರು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಭಜನೆ ಬಾರಿಸಿ, ಆಡಳಿತದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ಅಂಗವಿಕರು, ವೃದ್ಧರು, ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 3 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ತ್ಯಾಜ್ಯ ವಿಲೇವಾರಿ ಘಟಕ ತೆರವುಗೊಳಿಸುವಂತೆ ಒತ್ತಾಯಿಸಿದರು.

250 ಟನ್ ಸಾಮ್ಯರ್ಥದ ತ್ಯಾಜ್ಯ ವಿಲೇವಾರಿ ಘಟಕ ಇದಾಗಿದ್ದು, 66 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಗೊಬ್ಬರ ಮತ್ತು ಪ್ಲಾಸ್ಟಿಕ್ ಪ್ರತ್ಯೇಕ ಮಾಡಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಇಲ್ಲಿನ ತ್ಯಾಜ್ಯದಿಂದ ಸುತ್ತಲಿನ ಗ್ರಾಮಗಳಲ್ಲಿ ರೋಗಗಳು ಹರಡುತ್ತಿದ್ದು, ಶುದ್ಧ ಕುಡಿಯುವ ನೀರು ಮತ್ತು ಗಾಳಿ ಇಲ್ಲದೇ ಪರದಾಡುತ್ತಿದ್ದೇವೆ. ಕ್ಯಾನ್ಸರ್, ಲಿವರ್, ಕಿಡ್ನಿ, ಉಸಿರಾಟದ ಸಮಸ್ಯೆ ಆಗುತ್ತಿದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಮುಖಂಡ ಸಿದ್ದಪ್ಪ ಕಾಂಬಳೆ, ತ್ಯಾಜ್ಯ ವಿಲೇವಾರಿ ಘಟಕದಿಂದ ನಮಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ತ್ಯಾಜ್ಯವು ಭಾವಿ ಮತ್ತು ಬೋರ್‌ವೆಲ್‌ನಲ್ಲಿ ಸೇರಿ ನೀರು ಕಲುಷಿತಗೊಂಡಿದೆ. ಸುತ್ತಲೂ ಸಾವಿರಾರು ನಾಯಿಗಳು ಇವೆ. ನೊಣಗಳ ಕಾಟವು ಹೆಚ್ಚಾಗಿದೆ. ಈ ಎಲ್ಲಾ ಸಮಸ್ಯೆಯಿಂದ ಸಮೀಪದಲ್ಲಿರುವ ನಾಲ್ಕು ಶಾಲೆಗಳಿಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ. ಈ ಘಟಕ ತೆರವು ಮಾಡುವವರೆಗೆ ಗ್ರಾಪಂ, ತಾಪಂ, ಜಿಪಂ. ಚುನಾವಣೆ ಬಹಿಷ್ಕಾರ ಹಾಕಲು ನಾವು ನಿರ್ಣಯ ಕೈಗೊಂಡಿದ್ದೇವೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ನಾಗರಾಜ ಯಾದವ, ಬಾಹುರಾವ ಗಡ್ಕರಿ, ಮಾಂತೇಶ ತಳವಾರ ಸೇರಿದಂತೆ ತುರಮುರಿ ಗ್ರಾಮದ ಗ್ರಾಮಸ್ಥರು ಇದ್ದರು.--------


ಕೋಟ್‌ಸುಮಾರು 20 ವರ್ಷಗಳಿಂದ ಬೆಳಗಾವಿ ನಗರದ ಕಸವನ್ನು ತುರಮರಿ ಘಟಕದಲ್ಲಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಸುತ್ತಲಿನ ಗ್ರಾಮಗಳಲ್ಲಿ ವಾಯು ಮತ್ತು ಜಲ ಸಂಪೂರ್ಣ ಮಾಲಿನ್ಯವಾಗಿದೆ. ನಾವು ಅನೇಕ ಬಾರಿ ಹೋರಾಟ ಮಾಡಿ, ಜಿಲ್ಲಾಡಳಿತ, ಸಚಿವರು ಮತ್ತು ಶಾಸಕರಿಗೆ ಮನವಿ ಸಲ್ಲಿಸಿದರೂ ನಮ್ಮ ಸಮಸ್ಯೆ ಪರಿಹರಿಸುತ್ತಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಿಂದಿನ ಚುನಾವಣೆಯಲ್ಲಿ ಆಶ್ವಾಸನೆ ಕೊಟ್ಟಿದ್ದರು. ಆ ಪ್ರಕಾರ ಈ ಘಟಕ ತೆರವುಗೊಳಿಸಬೇಕು. ಈಗಾಗಲೇ ಈ ಹೋರಾಟದಲ್ಲಿ ಒಮ್ಮೆ ಜೈಲಿಗೂ ಹೋಗಿ ಬಂದಿದ್ದೇವೆ. ಇನ್ಮುಂದೆ ಜೀವ ಹೋದರೂ ಹೋರಾಟದಿಂದ ಹಿಂದೆ ಸರಿಯಲ್ಲ.ಮಹಾಂತೇಶ ತಳವಾರ, ಹೋರಾಟಗಾರ------

ಕೋಟ್‌ಇದು ಬಹಳ ಹಳೆಯ ಸಮಸ್ಯೆಯಾಗಿದ್ದು, ತ್ಯಾಜ್ಯ ವಿಲೇವಾರಿ ಘಟಕ ಬೇರೆ ಕಡೆ ಸ್ಥಳಾಂತರಕ್ಕೆ ಈಗಾಗಲೇ ಸಿದ್ಧತೆ ನಡೆಸಿದ್ದೇವೆ. ನಾವು ಮತ್ತು ಜನಪ್ರತಿನಿಧಿಗಳು ನಿಮ್ಮ‌ ಪರ ಇದ್ದೇವೆ. ಆದರೆ, ಏಕಾಏಕಿ ಒಂದೇ ದಿನದಲ್ಲಿ ಇಷ್ಟು ದೊಡ್ಡ ಘಟಕ ಸ್ಥಳಾಂತರ ಮಾಡುವುದು ಸುಲಭದ ಕೆಲಸವಲ್ಲ. ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಪರ್ಯಾಯ ಜಾಗ ಹುಡುಕಬೇಕಾಗುತ್ತದೆ. ಹೇಗೆ ಮತ್ತು ಎಲ್ಲಿ ಸ್ಥಳಾಂತರ ಮಾಡಬೇಕು ಎನ್ನುವುದನ್ನು ನಿಮ್ಮ ಜೊತೆಗೆ ಚರ್ಚಿಸಿ ನಿರ್ಧಾರ ತೆದುಕೊಳ್ಳುತ್ತೇವೆ.ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ