ಆಗಸ್ಟ್‌ 8ರಿಂದ ಶ್ರೀ ಸತ್ಯಾತ್ಮತೀರ್ಥರಿಂದ ಚಾತುರ್ಮಾಸ್ಯ

KannadaprabhaNewsNetwork |  
Published : Aug 03, 2026, 02:00 AM IST
ಶ್ರೀಸತ್ಯಾತ್ಮತೀರ್ಥರು | Kannada Prabha

ಸಾರಾಂಶ

ಶ್ರೀ ಮಧ್ವಾಚಾರ್ಯರಿಂದ ಪ್ರವರ್ತಿತ ಉತ್ತರಾದಿಮಠದ ೪೧ನೇ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ೩೧ನೇ ಚಾತುರ್ಮಾಸ್ಯ ಆ. ೮ರಿಂದ ಸೆ.೨೬ರ ವರೆಗೆ ನಗರದ ಉತ್ತರಾದಿಮಠದಲ್ಲಿ ನಡೆಯಲಿದೆ.

ಧಾರವಾಡ:

ಶ್ರೀ ಮಧ್ವಾಚಾರ್ಯರಿಂದ ಪ್ರವರ್ತಿತ ಉತ್ತರಾದಿಮಠದ ೪೧ನೇ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ೩೧ನೇ ಚಾತುರ್ಮಾಸ್ಯ ಆ. ೮ರಿಂದ ಸೆ.೨೬ರ ವರೆಗೆ ನಗರದ ಉತ್ತರಾದಿಮಠದಲ್ಲಿ ನಡೆಯಲಿದೆ ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೩೫ರಲ್ಲಿ ಶ್ರೀ ಸತ್ಯಧ್ಯಾನತೀರ್ಥರು ನಗರದಲ್ಲಿ ಚಾತುರ್ಮಾಸ್ಯ ಕೈಗೊಂಡಿದ್ದರು. ಇದಾದ ೯೦ ವರ್ಷಗಳ ನಂತರ ಧಾರವಾಡದಲ್ಲಿ ಸತ್ಯಾತ್ಮತೀರ್ಥರ ಚಾತುರ್ಮಾಸ್ಯ ನಡೆಯುತ್ತಿರುವುದು ವಿಶೇಷ. ಇದರಂಗವಾಗಿ ನಿತ್ಯ ಅನೇಕ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಜ್ಞಾನಸತ್ರ, ವಿದ್ವತ್‌ ಗೋಷ್ಠಿ, ಯುವಗೋಷ್ಠಿ, ವೈದ್ಯಕೀಯ ಗೋಷ್ಠಿ, ನಾಡಿನ ಖ್ಯಾತ ಸಂಗೀತಗಾರರಿಂದ ಕಛೇರಿ, ದಾಸವಾಣಿ, ಮಹಿಳಾ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.

ನಿತ್ಯ ಸಂಜೆ ೭.೩೦ರಿಂದ ೮.೩೦ರ ವರೆಗೆ ಶ್ರೀಗಳಿಂದ ಅನುಗ್ರಹಸಂದೇಶ(ಪ್ರವಚನ) ಇರುತ್ತದೆ. ಇದರ ನೇರ ಪ್ರಸಾರವೂ https://youtube.com/@uttradimath ಹಾಗೂ ಶ್ರೀ ಮಠದ ಸಮಗ್ರ ಮಾಹಿತಿಗೆ https://uttradimuth.org/chaturmasya ಜಾಲತಾಣದಲ್ಲಿ ವೀಕ್ಷಿಸಬಹುದು ಎಂದು ತಿಳಿಸಿದರು.

ವಿದ್ಯಾಕಾಶಿ ಖ್ಯಾತಿಯ ಧಾರವಾಡಕ್ಕೆ ವೇದ ಹಾಗೂ ವೇದಾಂತದ ಅಧ್ಯಯನಕ್ಕೆ ನಂಟಿದೆ. ಇದಕ್ಕೆ ಅನ್ವರ್ಥವಾಗುವಂತೆ ಶ್ರೀಸತ್ಯಾತ್ಮತೀರ್ಥರು ಇಲ್ಲಿ ಸರ್ವವಿದ್ಯಾಪ್ರದ ಶ್ರೀಲಕ್ಷ್ಮೀಹಯಗ್ರೀವ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಶ್ರೀಮಠದ ೪೦ನೇ ಯತಿಗಳಾದ ಶ್ರೀಸತ್ಯಪ್ರಮೋದ ತೀರ್ಥರ ಜನ್ಮಭೂಮಿಯೂ ಧಾರವಾಡವೇ ಆಗಿರುವುದು ಇನ್ನೊಂದು ವಿಶೇಷಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಚಾತುರ್ಮಾಸ್ಯ ಮಾಧ್ಯಮ ಸಂಯೋಜಕ ಸಮೀರ ಜೋಶಿ, ಹ.ವೆಂ. ಕಾಖಂಡಕಿ, ಕೃಷ್ಣ ಕಟ್ಟಿ, ಅಶೋಕ ಹುದ್ದಾರ, ಎನ್. ಆರ್. ಕುಲಕರ್ಣಿ, ಶ್ರೀಹರಿ ಕೊಪ್ಪರ, ಎಚ್.ಬಿ. ಕುಲಕರ್ಣಿ, ಆನಂದ ದೇಶಮುಖ, ಸಿ.ವೈ.‌ ರವೀಂದ್ರನ್‌, ಡಾ. ಶ್ರೀಕಾಂತ ಕರ್ಜಗಿ ಇತರರಿದ್ದರು.

ಬಾಕ್ಸ್‌...

ಮೊದಲ ಹಂತದ ಕಟ್ಟಡ ಪೂರ್ಣಶ್ರೀ ಸತ್ಯಾತ್ಮತೀರ್ಥರ ಅಪೇಕ್ಷೆಯಂತೆ ಒಟ್ಟು ₹ ೧೩ ಕೋಟಿ ವೆಚ್ಚದಲ್ಲಿ ಬೃಹತ್‌ ನೂತನ ಕಟ್ಟಡ ನಿರ್ಮಿಸಲಾಗುತ್ತಿದ್ದು ಇದರ ಮೊದಲ ಹಂತದಲ್ಲಿ ₹ ೫ ಕೋಟಿ ವೆಚ್ಚದಲ್ಲಿ ಗ್ರೌಂಡ್‌ ಮತ್ತು ಮೊದಲು ಅಂತಸ್ತಿನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ ಎಂದು ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಆರ್.ಎಂ. ಕುಲಕರ್ಣಿ ತಿಳಿಸಿದರು. ಈಗಾಗಲೇ ಕಾಮಗಾರಿ ಮುಗಿದಿದ್ದು ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಎದುರಿಗಿರುವ ರೈಲ್ವೆ ಕಲ್ಯಾಣ ಮಂಟಪ ಪಕ್ಕದ ಸ್ಥಳದಲ್ಲಿ ೧೮,೦೦೦ ಚದರ ಅಡಿ ಜಾಗದಲ್ಲಿ ಪ್ರಸಾದ ಹಾಗೂ ಸಂಜೆ ಪ್ರವಚನದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಮುದ್ರಾಧಾರಣೆ ಹಾಗೂ ಪಾದಪೂಜೆಯನ್ನು ರೈಲ್ವೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಶ್ರೀ ಲಕ್ಷ್ಮೀ ಸರಸ್ವತಿ ಹಯಗ್ರೀವ ದೇವತಾ ಸಮುಚ್ಚಯದ ಪಕ್ಕದಲ್ಲೇ ಸಂಸ್ಥಾನ ಪೂಜೆ ನಡೆಯಲಿದೆ. ಕೆಳಗಿನ ಅಂತಸ್ತಿನಲ್ಲಿ ಶ್ರೀಮಠದ ವಿದ್ವಾಂಸರು, ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಅಚ್ಚುಕಟ್ಟಾದ ವ್ಯವಸ್ಥೆಚಾತುರ್ಮಾಸ್ಯ ಸಮಿತಿ ಇನ್ನೊಬ್ಬ ಕಾರ್ಯಾಧ್ಯಕ್ಷ ಹನುಮಂತ ಕೊಟಬಾಗಿ ಮಾತನಾಡಿ, ೫೦ ದಿನ ನಡೆಯಲಿರುವ ಈ ಜ್ಞಾನೋತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಲಿದ್ದು ದಿನವೂ ಕನಿಷ್ಠ ೩ರಿಂದ ೫ ಸಾವಿರ ಭಕ್ತರು ಸೇರಲಿದ್ದಾರೆ. ವಾರಾಂತ್ಯಕ್ಕೆ ೭ರಿಂದ ೮ ಸಾವಿರ ಭಕ್ತರು ಸೇರುವ ಅಂದಾಜಿದೆ. ಶ್ರೀಸತ್ಯಪ್ರಮೋಧತೀರ್ಥರ ತತ್ವ ಸಿದ್ಧಾಂತ ಕೇಂದ್ರಿತ ಸ್ಮರಣ ಸಂಚಿಕೆ ಕೂಡ ತರಲಾಗುವುದು. ಇದೊಂದು ಐತಿಹಾಸಿಕ ಉತ್ಸವವಾಗಿದ್ದು ಭಕ್ತರ ಸಹಾಯ ಸಹಕಾರದಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪೈಪೋಟಿ, 22 ಆಕಾಂಕ್ಷಿಗಳಿಂದ ಅರ್ಜಿ
ಮಾನವ ಹಕ್ಕುಗಳಿಂದ ಯಾರೂ ವಂಚಿತರಾಗದಿರಲಿ