ಭಟ್ಕಳ: ನಾಮಧಾರಿ ಕುಲಗುರುಗಳಾದ ಉಜಿರೆಯ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ 5ನೇ ಚಾತುರ್ಮಾಸ್ಯ ವ್ರತಾಚರಣೆಯನ್ನು ತಾಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ ನಡೆಸಲು ನಿರ್ಧರಿಸಿದ್ದು, ಜು. 21ರಿಂದ ಆ. 30ರ ವರೆಗೆ ನಡೆಯುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ತಿಳಿಸಿದರು.
ಬುಧವಾರ ಪಟ್ಟಣದ ಆಸರಕೇರಿ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಜು. 21ರಿಂದ ಆ. 30ರ ತನಕ ಭಟ್ಕಳದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ನಡೆಸುತ್ತಿರುವುದು ಹೆಮ್ಮಯ ವಿಷಯವಾಗಿದೆ. ಜಿಲ್ಲೆಯ ನಾಮಧಾರಿಗಳೂ ಸೇರಿದಂತೆ ಹಿಂದುಳಿದ ಸಮಾಜದವರು ಗುರುಗಳು ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆಯಬಹುದು. ಚಾತುರ್ಮಾಸ್ಯ ಕಾರ್ಯಕ್ರಮವನ್ನು ಭಟ್ಕಳ ಹಾಗೂ ಮಾವಳ್ಳಿ ನಾಮಧಾರಿ ಕೂಟಗಳ ಸಹಯೋಗದಲ್ಲಿ ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ದಿವಸ ಗುರುಗಳ ಪಾದಪೂಜೆ, ಸತ್ಸಂಗ, ಅನ್ನಸಂತರ್ಪಣೆ ಹಾಗೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಜೂ. 21ರಂದು ಭಟ್ಕಳ ಪಟ್ಟಣದ ಆಸರಕೇರಿಯ ವೆಂಕಟ್ರಮಣ ದೇವಸ್ಥಾನದಿಂದ ಶ್ರೀಗಳನ್ನು ಭವ್ಯ ಮರೆವಣಿಗೆಯಲ್ಲಿ ಕರಿಕಲ್ ಧ್ಯಾನಮಂದಿರಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು. ಆ. 30ರಂದು ಶ್ರೀಗಳ ಚಾತುರ್ಮಾಸ್ಯದ ಸೀಮಾಲ್ಲೊಂಘನೆ ಸಾರದಹೊಳೆಯ ಸಾರದ ನದಿಯ ತಟದಲ್ಲಿ ನಡೆಯಲಿದೆ ಎಂದರು.ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಆಸರಕೇರಿ, ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿದರು. ಭಟ್ಕಳ ನಾಮಧಾರಿ ಹೋಬಳಿ ಅಧ್ಯಕ್ಷ ಅರುಣ ನಾಯ್ಕ, ಮಾವಳ್ಳಿ ಹೋಬಳಿ ಅಧ್ಯಕ್ಷ ಆರ್.ಕೆ. ನಾಯ್ಕ, ಹಳೇಕೋಟೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ ಮಾತನಾಡಿದರು. ಪ್ರಮುಖರಾದ ಕೃಷ್ಣಾ ನಾಯ್ಕ ಪ್ರಥ್ವಿ, ಎಂ.ಕೆ. ನಾಯ್ಕ, ಈರಪ್ಪ ಗರಡಿಕರ್, ಸತೀಶಕುಮಾರ ನಾಯ್ಕ, ಡಿ.ಎಲ್. ನಾಯ್ಕ,ಶಾಂತರಾಮ ನಾಯ್ಕ, ಮಹಾಬಲೇಶ್ವರ ನಾಯ್ಕ ಸೇರಿದಂತೆ ಭಟ್ಕಳ ಹಾಗೂ ಮಾವಳ್ಳಿ ಹೋಬಳಿಯ ನಾಮಧಾರಿ ಕೂಟದ ಸದಸ್ಯರಿದ್ದರು.