ಚನ್ನಪಟ್ಟಣ: ಹೂಡಿಕೆಯ ಹೆಸರಿನಲ್ಲಿ ಗೃಹಿಣಿಯೊಬ್ಬರಿಂದ 4.94 ಲಕ್ಷ ರು. ಹಣ ಪಡೆದು ವಂಚಿಸಿರುವ ಘಟನೆ ತಾಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ವಮಂಗಳ (28) ಹಣ ಕಳೆದುಕೊಂಡ ಗೃಹಿಣಿ. ಇನ್‌ಸ್ಟಾ ಗ್ರಾಂನಲ್ಲಿ ಬಂದ ಜಾಹೀರಾತು ನೋಡಿ ಸರ್ವಮಂಗಳ 8 ತಿಂಗಳ ಹಿಂದೆ ಆಲ್‌ಫೆನ್ ಎಂಬ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಹೂಡಿಕೆದಾರರು ಸರ್ವಮಂಗಳ ಅವರ ಖಾತೆಗೆ ವರ್ಗಾಸಿದ ಹಣವನ್ನು ಕಂಪನಿ ಸೂಚಿಸಿದ ಖಾತೆಗೆ ಇವರು ವರ್ಗಾಯಿಸುತ್ತಿದ್ದರು. ಎರಡು ತಿಂಗಳ ಹಿಂದೆ ಇವರಿಗೂ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದು, ಅದರಂತೆ ಸರ್ವಮಂಗಳ 4.94 ಲಕ್ಷ ಹೂಡಿಕೆ ಮಾಡಿದ್ದರು. ಆ ನಂತರ ಕಂಪನಿಯ ವೆಬ್‌ಸೈಟ್ ತೆರೆಯಲು ಪ್ರಯತ್ನಿಸಿದರೆ ಅದು ತೆರೆದುಕೊಳ್ಳುತ್ತಿಲ್ಲ ಹಾಗೂ ನನ್ನ ಹಣವೂ ಸಹ ವಾಪಸ್ ನೀಡದೆ ವಂಚಿಸಲಾಗಿದೆ ಎಂದು ಸರ್ವಮಂಗಳ ರಾಮನಗರದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.