ತಪಾಸಣೆ ನಡೆಸಿ ಮಕ್ಕಳ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡಿ: ನಲಿನ್ ಅತುಲ್

KannadaprabhaNewsNetwork |  
Published : Oct 10, 2024, 02:22 AM IST
9ಕೆಪಿಎಲ್25 ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧುವಾರ ಹಮ್ಮಿಕೊಂಡಿದ್ದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆ | Kannada Prabha

ಸಾರಾಂಶ

ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ತಾಯಂದಿರ ಮತ್ತು ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು ಒತ್ತು ನೀಡಲಾಗುತ್ತಿದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ: ಅಂತರ ಇಲಾಖೆ ಸಮನ್ವಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಕ್ಕಳ ಕಾಯಿಲೆ ಮತ್ತು ಕುಂಠಿತ ಬೆಳವಣಿಗೆಯ ತೊಂದರೆ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದ್ದಾರೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ತಾಯಂದಿರ ಮತ್ತು ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು ಒತ್ತು ನೀಡಲಾಗುತ್ತಿದೆ. ಹುಟ್ಟುವ ಮಕ್ಕಳಲ್ಲಿ ಆಜನ್ಮ ನ್ಯೂನ್ಯತೆ 100ಕ್ಕೆ 6ರಿಂದ 7 ಮಕ್ಕಳಲ್ಲಿದ್ದು, ಶೇ.10ರಷ್ಟು ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಇರುತ್ತದೆ. ಪೌಷ್ಠಿಕ ಆಹಾರದ ಕೊರತೆ ಇತರೆ ಕಾಯಿಲೆಗಳು ಬಂದು ಮಕ್ಕಳ ಮರಣ ಸಂಭವಿಸುವ ಸಾಧ್ಯತೆಯಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಆರಂಭವಾಗಿದೆ. ಹುಟ್ಟಿದ ಮಗುವಿನಿಂದ ಹಿಡಿದು 18 ವರ್ಷದವರೆಗಿನ ಮಕ್ಕಳಿಗೆ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಲು ವೈದ್ಯಕೀಯ ಶಾಲಾ ಆರೋಗ್ಯ ತಂಡ ರಚಿಸಲಾಗಿದೆ. ಈ ತಂಡಗಳು ಅಂಗನವಾಡಿ ಕೇಂದ್ರ ಹಾಗೂ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ನಡೆಸುವಂತಾಗಬೇಕು. ಈ ಹಿನ್ನೆಲೆ ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

0 ರಿಂದ 6 ವಾರದ ಮಕ್ಕಳಲ್ಲಿ ಹುಟ್ಟಿದಾಗಿನ ಯಾವುದೇ ರೀತಿಯ ನೂನ್ಯತೆಗಳು ಕಂಡುಬಂದಲ್ಲಿ ಅಂತಹ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಆಶಾ ಕಾರ್ಯಕತೆಯರ ಮನೆ ಭೇಟಿ ಮೂಲಕ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳಲ್ಲಿ ಆರೋಗ್ಯ ತಪಾಸಣೆ ನಡೆಸುವ ಸಂದರ್ಭದಲ್ಲಿ 6 ವರ್ಷದೊಳಗಿನ ಎಲ್ಲ ಮಕ್ಕಳ ತಪಾಸಣೆಗೆ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಮಾತನಾಡಿ, ಆಜನ್ಮ ನ್ಯೂನ್ಯತೆಯು ನರದೋಷ, ಡೌನ್ ಸಿಂಡ್ರೋಮ್, ಸೀಳು ತುಟಿ, ವಕ್ರಪಾಸ, ಜನ್ಮಜಾತ ಕಣ್ಣಿನ ಪೊರೆ, ಕಿವುಡು, ಹೃದಯ ಕಾಯಿಲೆ ಸಮಸ್ಯೆ ಒಳಗೊಂಡಿದೆ. ಕುಂಠಿತ ಬೆಳವಣಿಗೆಯಲ್ಲಿ ದೃಷ್ಟಿ, ಶ್ರವಣ, ಜ್ಞಾನ ಗ್ರಹಣ, ಭಾಷೆ ನಡವಳಿಕೆ, ಕಲಿಕೆ ಇತ್ಯಾದಿ ಇದೆ. ಪೌಷ್ಠಿಕಾಂಶದ ಕೊರತೆಯಿಂದ ಅಪೌಷ್ಠಿಕತೆ, ಎ ಮತ್ತು ಡಿ ಅನ್ನಾಂಗದ ಕೊರತೆಯಿಂದ ದೃಷ್ಟಿ ಹೀನತೆ, ಚರ್ಮಕ್ಕೆ ಸಂಬಂಧಿಸಿದ ತೊಂದರೆ, ಅಯೋಡಿನ್ ಕೊರತೆಯಿಂದ ಗಳಗಂಡ ರೋಗ ಬರಬಹುದು. ಮಕ್ಕಳಲ್ಲಿ ಕಿವಿ ಸೋರುವುದು, ಹಲ್ಲಿನ ಸಮಸ್ಯೆ, ಸಾಮಾನ್ಯ ಜ್ವರ, ಶ್ವಾಸಕೋಶದ ಸೋಂಕು, ಚರ್ಮದ ಕಾಯಿಲೆ ಮುಂತಾದ ಸಮಸ್ಯೆ ಕಾಣಿಸಿಕೊಂಡರೆ ಈ ಕಾರ್ಯಕ್ರಮದಡಿ ತಪಾಸಣೆ, ಪತ್ತೆ ಹಚ್ಚುವಿಕೆ, ಚಿಕಿತ್ಸೆ, ರೆಫರಲ್ ಹಾಗೂ ಅನುಸರಣೆಯನ್ನು ಉಚಿತವಾಗಿ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಕ್ಕೆ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವಿಂದ್ರನಾಥ ಎಂ.ಎಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ್ ಎಚ್., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶಶೀಧರ ಎ. ಸೇರಿದಂತೆ ವಿವಿಧ ತಾಲೂಕುಗಳ ತಾಲೂಕಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಜಿಲ್ಲಾಸ್ಪತ್ರೆಯ ತಜ್ಞವೈದ್ಯರು, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸಿ ಕೋರ್ಟಲ್ಲಿ ಕೇಸ್‌ ವಿಲೇವಾರಿ ಬಾಕಿ : ಕೃಷ್ಣ ಕಿಡಿ
ಬೇಸಿಗೆ ಆರಂಭದಲ್ಲೇ ಕೆರೆಗಳು ಅರ್ಧಖಾಲಿ - 2268 ಕೆರೆಗಳಲ್ಲಿ ಶೇ.50 ನೀರೂ ಇಲ್ಲ