ಬೆಂಗಳೂರು : ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ರಾಮನಗರ, ತುಮಕೂರು, ಕೊಳ್ಳೇಗಾಲ, ಹುಣಸೂರು, ತರೀಕೆರೆ ವಲಯಗಳಲ್ಲಿ ಅತಿ ಹೆಚ್ಚು ಪ್ರಕರಣ ಬಾಕಿ ಇದ್ದು, ಕೆಲ ಎಸಿಗಳ (ಉಪ ವಿಭಾಗಾಧಿಕಾರಿಗಳ) ಬೇಜವಾಬ್ದಾರಿಯಿಂದ ಉಳಿದ ಎಸಿಗಳಿಗೂ ಕೆಟ್ಟ ಹೆಸರು ಬರುತ್ತಿದೆ. ಇಂಥ ನಿರ್ಲಕ್ಷ್ಯ ಧೋರಣೆ ಸಹಿಸುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.
180 ದಿನ ಮೀರಿದ ಪ್ರಕರಣವನ್ನು ವಿಲೇವಾರಿ ಮಾಡಬೇಕು
ಅವಧಿ ಮೀರಿದರೂ ಪ್ರಕರಣ ಇತ್ಯರ್ಥ ಮಾಡದೆ ಬಾಕಿ ಉಳಿಸಿಕೊಂಡಿರುವ ಉಪ ವಿಭಾಗಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. 180 ದಿನ ಮೀರಿದ ಪ್ರಕರಣವನ್ನು ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಅಂಥ ಅಧಿಕಾರಿಗಳಿಗೆ ಆಟೋ ಜನರೇಟೆಡ್ ನೋಟಿಸ್ ಜಾರಿ ಮಾಡುತ್ತೇವೆ. ನೋಟಿಸ್ ತಲುಪಿಯೂ ಕೆಲಸ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಉಪ ವಿಭಾಗಾಧಿಕಾರಿಗಳ (ಎಸಿ) ಜತೆ ವರ್ಚುಯಲ್ ಸಭೆ ನಡೆಸಿ ಮಾತನಾಡಿದ ಅವರು, ಎಸಿ ನ್ಯಾಯಾಲಯಗಳಲ್ಲಿನ ಅವಧಿ ಮೀರಿದ ಶೇ.80 ಕ್ಕೂ ಹೆಚ್ಚು ಬಾಕಿ ಪ್ರಕರಣಗಳನ್ನೂ ಈಗಾಗಲೇ ವಿಲೇವಾರಿ ಮಾಡಲಾಗಿದೆ. ರೆಗ್ಯುಲರ್ ಎಸಿಗಳು ಮತ್ತಷ್ಟು ಶ್ರಮವಹಿಸಿದರೆ ಮೇ 20ಕ್ಕೆ ಈ ಸಂಖ್ಯೆ ಮತ್ತಷ್ಟು ಇಳಿಯಲಿದೆ. ಆದರೆ ರೆಗ್ಯುಲರ್ ಎಸಿಗಳು ವಿಶೇಷ ಎಸಿಗಳಂತೆ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಹುಣಸೂರಿನಲ್ಲಿ 640 ಪ್ರಕರಣ ಬಾಕಿ
ಕೆಲ ಎಸಿಗಳ ಬೇಜವಾಬ್ದಾರಿಯಿಂದ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಎಸಿಗಳಿಗೂ ಕೆಟ್ಟ ಹೆಸರು ಬರುತ್ತಿದೆ. ಹುಣಸೂರಿನಲ್ಲಿ 640 ಪ್ರಕರಣ ಬಾಕಿ ಇದೆ. ತುಮಕೂರಿನಲ್ಲಿ ಅತಿಹೆಚ್ಚು ಎಂದರೆ ಅವಧಿ ಮೀರಿದ 1,900 ಪ್ರಕರಣ ಬಾಕಿ ಇವೆ. ಈ ಪೈಕಿ 180 ದಿನಕ್ಕೂ ಮೀರಿದ 91 ಪ್ರಕರಣಗಳು ಬಾಕಿ ಇವೆ. ಮುಂದಿನ ಎರಡು ತಿಂಗಳ ಒಳಗಾಗಿ ಈ ಪ್ರಕರಣ ವಿಲೇವಾರಿ ಮಾಡಿರಬೇಕು. ಜತೆಗೆ 1,500 ಅವಧಿ ಮೀರಿದ ಪ್ರಕರಣ ಹೊಂದಿರುವ ದೊಡ್ಡಬಳ್ಳಾಪುರದಲ್ಲೂ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಅಸಡ್ಡೆ ಸಹಿವುದಿಲ್ಲ ಎಂದು ಕೃಷ್ಣಬೈರೇಗೌಡ ಸೂಚಿಸಿದರು.
