ಕುಡಿಯುವ ನೀರು ಯೋಗ್ಯವೇ ಎಂದು ಪರೀಕ್ಷಿಸಿ: ಡಾ.ಎಸ್. ಸೆಲ್ವಕುಮಾರ್ ಸೂಚನೆ

KannadaprabhaNewsNetwork |  
Published : Aug 27, 2024, 01:36 AM IST
1 | Kannada Prabha

ಸಾರಾಂಶ

ಕಂದಾಯ ಇಲಾಖೆಯ ಸೇವೆಗಳು ಸಕಾಲದಲ್ಲಿ ಜನರಿಗೆ ದೊರೆಯಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡು ಸಿಎಸ್ಆರ್ ಅನುದಾನವನ್ನು ಬಳಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದೆ. ಕುಡಿಯುವ ನೀರಿಗೆ ಕೊರತೆ ಇಲ್ಲ. ಆದರೆ, ಜನರಿಗೆ ಕುಡಿಯಲು ಯೋಗ್ಯವಾದ ನೀರನ್ನು ನೀಡಬೇಕು. ಹೀಗಾಗಿ, ಪ್ರತಿ ಗ್ರಾಮದಲ್ಲೂ ನಿಯಮಿತವಾಗಿ ಕುಡಿಯಲು ನೀರು ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಿ ನೀಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಯಿಂದ ಆದ ಪ್ರಾಣ ಹಾನಿ, ಜಾನುವಾರು, ಮನೆ ಹಾಗೂ ಬೆಳೆ ಹಾನಿಗಳಿಗೆ ಎನ್ ಡಿಆರ್ ಎಫ್ ಸೂಚನೆಗಳ ಪ್ರಕಾರ ಪರಿಹಾರ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆಯ ಸೇವೆಗಳು ಸಕಾಲದಲ್ಲಿ ಜನರಿಗೆ ದೊರೆಯಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡು ಸಿಎಸ್ಆರ್ ಅನುದಾನವನ್ನು ಬಳಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು. ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಮಾಡಿದ್ದು, ಇವರನ್ನು ಮರಳಿ ಶಾಲೆಗೆ ತರಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸಬೇಕು. ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ನಿಯಮಿತ ತಪಾಸಣೆಗೊಳಪಡಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಅವರು ಹೇಳಿದರು.

ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಂಡು, ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವಿನ ಕಿಟ್ ಗಳನ್ನು ವಿತರಿಸಿ, ಮೇವು ಬೆಳವಣಿಗೆಗೆ ಉತ್ತೇಜನ ನೀಡಬೇಕು ಎಂದರು.

ಹಾನಿಗೆ ಪರಿಹಾರ:

ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ಶೇ.42ರಷ್ಟು ಹೆಚ್ಚಾಗಿದೆ. ಕಬಿನಿ ಮತ್ತು ಕೆಆರ್ ಎಸ್ ನಿಂದ ಹೆಚ್ಚುವರಿ ನೀರು ಬಿಟ್ಟಿದ್ದರಿಂದ ಟಿ. ನರಸಿಪುರ ಹಾಗೂ ನಂಜನಗೂಡು ತಾಲೂಕಿನ ಕೆಲವು ಗ್ರಾಮಗಳ ಬೆಳೆಗಳು ನಾಶ ಆಗಿವೆ. ಇದಕ್ಕೆ ಪರಿಹಾರ ನೀಡಲು ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ 75 ಮನೆಗಳು ಮಳೆಯಿಂದ ಪೂರ್ಣ ಪ್ರಮಾಣದ ಹಾನಿಯಾಗಿವೆ. ಇವುಗಳಿಗೆ 1.20 ಲಕ್ಷ ರು. ಪರಿಹಾರ ನೀಡಲಾಗುತ್ತಿದೆ. 83 ಮನೆಗಳು ಬಾಗಶಃ ಹಾನಿ ಆಗಿವೆ. ಇವುಗಳಿಗೆ 50 ಸಾವಿರ ರು. ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಬಾಳೆ ಮತ್ತು ತಂಬಾಕು ಬೆಳೆ ಹೆಚ್ಚಿನ ಹಾನಿ ಆಗಿದೆ. ರೈತರ ಜಮೀನುಗಳಿಗೆ ಆಧಾರ್ ಸಿಡಿಂಗ್ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಶೇ.70 ರಷ್ಟು ಆಧಾರ್ ಸೀಡಿಂಗ್ ಆಗಿದೆ. ಉಳಿದ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮಾತನಾಡಿ, ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಿಎಸ್ ಆರ್ ಅನುದಾನಕ್ಕೆ ಜಿಲ್ಲೆಯಲ್ಲಿರುವ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಲಾಗಿದೆ. ವಿವಿಧ ಶಾಲೆಗಳ ಹೆಚ್ಚುವರಿ ಕೊಠಡಿಗಳ ನಿರ್ಮಾಣವಾಗುತ್ತಿದ್ದು, ಇವುಗಳ ಗುಣಮಟ್ಟವನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್, ಡಿಸಿಎಫ್ ಡಾ.ಕೆ.ಎನ್. ಬಸವರಾಜು, ಜಿಪಂ ಉಪ ಕಾರ್ಯದರ್ಶಿ ಡಾ.ಎಂ. ಕೃಷ್ಣರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ