ದಿಡುಪೆ -ಎಳನೀರು ರಸ್ತೆ ಅಭಿವೃದ್ಧಿ ಬಗ್ಗೆ ಬೆಳ್ತಂಗಡಿ, ಮೂಡಿಗೆರೆ ಶಾಸಕರಿಂದ ಪ್ರಯತ್ನ

KannadaprabhaNewsNetwork |  
Published : Jan 25, 2024, 02:06 AM IST
ಎಳನೀರು | Kannada Prabha

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಗೆ ತೀರಾ ಹತ್ತಿರದ ಸಂಪರ್ಕ ಕಲ್ಪಿಸುವ ದಿಡುಪೆ-ಎಳನೀರು- ಸಂಸೆ ರಸ್ತೆಯ ಅಭಿವೃದ್ಧಿ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಂಗಳವಾರ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಚಿಕ್ಕಮಗಳೂರು ಜಿಲ್ಲೆಗೆ ತೀರಾ ಹತ್ತಿರದ ಸಂಪರ್ಕ ಕಲ್ಪಿಸುವ ದಿಡುಪೆ-ಎಳನೀರು- ಸಂಸೆ ರಸ್ತೆಯ ಅಭಿವೃದ್ಧಿ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ಮಂಗಳವಾರ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಶಾಸಕಿ ನಯನಾ ಮೋಟಮ್ಮ ಬೆಳಗಾವಿ ಅಧಿವೇಶನದ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದಿಡುಪೆ-ಎಳನೀರು- ಸಂಸೆ ರಸ್ತೆಯ ಬಗ್ಗೆ ಪ್ರಸ್ತಾಪಿಸಿದ್ದು ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದರು. ರಸ್ತೆ ಬೆಳ್ತಂಗಡಿ ವ್ಯಾಪ್ತಿಯಲ್ಲಿದ್ದರೂ ಇದರ ಹೆಚ್ಚಿನ ಉಪಯೋಗ ಚಿಕ್ಕಮಗಳೂರು ವಿಭಾಗದ ಜನರಿಗೆ ಇದೆ. ಚಾರ್ಮಾಡಿ ಘಾಟಿಗೆ ಇದು ಪರ್ಯಾಯ ರಸ್ತೆಯಾಗಿದ್ದು, ಈ ಜಿಲ್ಲೆಯಿಂದ ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ಹೋಗುವವರಿಗೆ ಹತ್ತಿರದ ಸಂಪರ್ಕವಾಗಿದೆ.ಧರ್ಮಸ್ಥಳ, ಕಳಸ, ಹೊರನಾಡು, ಶೃಂಗೇರಿ ಹೋಗುವವರಿಗೂ ಇದು ಹತ್ತಿರದ ರಸ್ತೆ. ಈ ರಸ್ತೆ ನಿರ್ಮಾಣವಾದರೆ ಅನೇಕ ಅನುಕೂಲಗಳು ಜನರಿಗೆ ಸಿಗಲಿವೆ. ಪಕ್ಷ ಬೇರೆಯಾದರು ಜನಹಿತಕ್ಕಾಗಿ ಜತೆಯಾಗಿ ಕೆಲಸ ಮಾಡುತ್ತೇವೆ. ಈ ರಸ್ತೆ ವಿಚಾರದ ಬಗ್ಗೆ ಅರಣ್ಯ ಸಚಿವರ ಗಮನಕ್ಕೆ ತರಲಾಗುವುದು ಹಾಗೂ ಇಲ್ಲಿನ ತೊಡಕುಗಳ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸಲಾಗುವುದು. ಮುಂದಿನ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಈ ರಸ್ತೆ ಅಭಿವೃದ್ಧಿ ಅನೇಕ ವರ್ಷಗಳ ಹೋರಾಟವಾಗಿದೆ. ಇದಕ್ಕೆ ತಾರ್ಕಿಕ ಅಂತ್ಯ ದೊರಕಬೇಕೆಂಬ ಉದ್ದೇಶದಿಂದ ಮೂಡಿಗೆರೆ ಶಾಸಕಿಯವರಲ್ಲಿ ಮಾತುಕತೆ ನಡೆಸಿದ್ದೆ. ಈ ರಸ್ತೆ ನಿರ್ಮಾಣವಾದರೆ ರಾಜ್ಯಕ್ಕೆ ಅನುಕೂಲವಾಗಲಿದೆ. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ರಸ್ತೆಯನ್ನು ವೀಕ್ಷಿಸಲಾಗಿದೆ. ಅರಣ್ಯ ಸಚಿವರು, ಮೂಡಿಗೆರೆ ಶಾಸಕಿ ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗದೊಂದಿಗೆ ಸಭೆಯನ್ನು ನಡೆಸಿ ಉಳಿದ 5 ಕಿ.ಮೀ. ರಸ್ತೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ಬಗ್ಗೆ ರಾಜಕೀಯ ರಹಿತವಾಗಿ ಕೆಲಸ ಮಾಡಲಾಗುವುದು ಎಂದರು.ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಮಾತನಾಡಿ ಎರಡು ಕ್ಷೇತ್ರದ ಶಾಸಕರೊಂದಿಗೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸೂಚಿಸಿದ್ದಾರೆ. ರಸ್ತೆ ಅಭಿವೃದ್ಧಿ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.ಕಾರ್ಕಳ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಬೆಳ್ತಂಗಡಿ ಆರ್‌ ಎಫ್‌ ಒ ಸ್ವಾತಿ, ಮಲವಂತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಜೈನ್, ಮಾಜಿ ಅಧ್ಯಕ್ಷ ದಿನೇಶ್ ಗೌಡ, ಅನಿತಾ ರಮೇಶ, ಮಾಜಿ ಸದಸ್ಯ ಅರುಣ್ ಕುಮಾರ್, ಪ್ರಮುಖರಾದ ಮಧುಸುಧನ್, ಪ್ರಮೋದ್ ಸಂಸೆ, ಮೃತ್ಯುಂಜಯ ಜೈನ್, ವರ್ಧಮಾನ್ ಜೈನ್, ಮಹೇಶ್ ಗುತ್ಯಡ್ಕ, ವಿಜಯ ಗೌಡ ಬದಾ, ಕೆಪಿಸಿಸಿ ಸದಸ್ಯ ಪ್ರಭಾಕರ ಕೆ.ಆರ್., ಬ್ಲಾಕ್ ಅಧ್ಯಕ್ಷೆ ಶ್ರೇಣಿತಾ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ತಾ.ಪಂ. ಮಾಜಿ ಸದಸ್ಯರಾದ ರಾಜೇಂದ್ರ ಪ್ರಸಾದ್, ಅಬ್ದುಲ್ ರಫೀಕ್, ವೀರೇಂದ್ರ ಮತ್ತಿತರರು ಉಪಸ್ಥಿತರಿದ್ದರು‌.ಅರಣ್ಯ ಕಾಯಿದೆ ಅಡ್ಡಿ -

ದಿಡುಪೆ-ಎಳನೀರು ರಸ್ತೆ ಬೆಳ್ತಂಗಡಿಯಿಂದ 45 ಕಿಮೀ ವ್ಯಾಪ್ತಿಯಲ್ಲಿ ಸಂಸೆಗೆ ಸಂಪರ್ಕ ಕಲ್ಪಿಸುತ್ತದೆ. ವನ್ಯ ಜೀವಿ ವಿಭಾಗವಾದ ಕಾರಣ ಅರಣ್ಯ ಕಾಯಿದೆ ಈ ರಸ್ತೆ ಅಭಿವೃದ್ಧಿಗೆ ತೊಡಕಾಗಿದೆ. ಕಂದಾಯ ವಿಭಾಗದಲ್ಲಿ ಬರುವ ಎರಡು ಕಿಮೀ ರಸ್ತೆ ಈಗಾಗಲೇ ಅಭಿವೃದ್ಧಿ ಹೊಂದಿದೆ. ಆದರೆ ಅರಣ್ಯ ವ್ಯಾಪ್ತಿಯಲ್ಲಿನ ಐದು ಕಿಮೀ ರಸ್ತೆ ಪೂರ್ಣಗೊಳ್ಳದೆ, ಇದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತಿಲ್ಲ. ಈ ರಸ್ತೆ ಕೇವಲ ಫೋರ್ ವೀಲ್ ಜೀಪು ಸಂಚರಿಸುವಷ್ಟು ಮಾತ್ರ ಉತ್ತಮವಾಗಿದೆ. ಮಳೆಗಾಲದಲ್ಲಿ ಇಲ್ಲಿ ಸಂಚಾರ ಅಸಾಧ್ಯ. ಈ ರಸ್ತೆ ಅಭಿವೃದ್ಧಿ ಹೊಂದಿದರೆ ಎಳನೀರಿನ ಜನತೆ ತಾಲೂಕು ಕೇಂದ್ರಕ್ಕೆ ಹಾಗೂ ಪಂಚಾಯತಿಗೆ ಬರಲು 120 ಕಿಮೀ ಅಲೆದಾಡುವುದು ತಪ್ಪಲಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ