ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರದ ಗಾಂಧಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸಂಘ-ಸಂಸ್ಥೆಗಳು ಸಹಯೋಗದಲ್ಲಿ ಸಿದ್ಧಗಂಗಾ ಶಾಲೆ ಮಕ್ಕಳಿಂದ ಐತಿಹಾಸಿಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವಿನೂತನ ಕಾರ್ಯಕ್ರಮದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿ, ನೋಡುಗರ ಮೆಚ್ಚುಗೆಗೆ ಪಾತ್ರವಾಗುತ್ತಿವೆ.
ದಾವಣಗೆರೆಯ ಸಿದ್ಧಗಂಗಾ ಶಾಲೆಯ ಸುಮಾರು 1,250 ಮಕ್ಕಳು ಸಂವಿಧಾನ ಪೀಠಿಕೆಯ ಪ್ರಮುಖ ಅಂಶಗಳಾದ ಡೆಮಾಕ್ರಸಿ, ಸೋಶಿಯಲಿಸ್ಟಿಕ್, ಸೆಕ್ಯುಲರ್, ಡೆಮಾಕ್ರಟಿಕ್, ರಿಪಬ್ಲಿಕ್, ಜಸ್ಟೀಸ್, ಲಿಬರ್ಟಿ, ಈಕ್ವಾಲಿಟಿ, ಫೆಟರ್ನಿಟಿ ಪದಗಳನ್ನು ಇಂಗ್ಲಿಷ್ ಅಕ್ಷರದಲ್ಲಿ ಮೂಡಿಸಿ ಎಲ್ಲರನ್ನು ಚಕಿತಗೊಳಿಸಿದರು.ಮಕ್ಕಳು ಪ್ರಜಾಪ್ರಭುತ್ವದ ಮಹತ್ವ ಪ್ರದರ್ಶಿಸುವ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಹರಿಹರ ಶಾಸಕ ಬಿ.ಪಿ.ಹರೀಶ ಭೋದಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಜಾಪ್ರಭುತ್ವದ ಮಹತ್ವ ವಿವರಿಸಿ, ಎಲ್ಲರ ಸಹಭಾಗಿತ್ವಕ್ಕೆ ವಂದಿಸಿದರು. ಅಲ್ಲದೇ ತಾವೂ ಸಹ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಸಂಭ್ರಮಿಸಿದರು. ಸಸಿ ನೆಟ್ಟು ನೀರೆರೆದು ದಿನದ ಸ್ಮರಣೆಯನ್ನು ಶಾಶ್ವತಗೊಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್‌ಪಿ ಉಮಾ ಪ್ರಶಾಂತ, ಜಿಪಂ ಸಿಇಒ ಸುರೇಶ ಇಟ್ನಾಳ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿದ್ಧಗಂಗಾ ಶಾಲೆಯ ಮಕ್ಕಳ ಸಾಧನೆಯನ್ನು ಶ್ಲಾಘಿಸಿದರು. ಡಾ.ಡಿ.ಎಸ್.ಜಯಂತ್ ಮತ್ತು ತಂಡದ ಪರಿಕಲ್ಪನೆಯಲ್ಲಿ ಈ ಪ್ರದರ್ಶನ ಗಮನ ಲೆಳೆಯಿತು.