ಕನ್ನಡಪ್ರಭ ವಾರ್ಚೆ ಮೇಲುಕೋಟೆ
ಚೆಲುವನಾರಾಯಣಸ್ವಾಮಿಯವರ ತೀರ್ಥಸ್ನಾನದ ದಿನವಾದ ಏ.12ರ ಶನಿವಾರ ಸಮೀಪದ ನಾರಾಯಣಪುರ ಗ್ರಾಮದ ಬರಡು ಹೊಲದಲ್ಲಿ ಪವಾಡಕ್ಕೆ ಸಾಕ್ಷಿಯಾಗಿರುವ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ.ಮೇಲುಕೋಟೆಗೆ 12 ಕಿಲೋ ಮೀಟರ್ ದೂರದ ನಾರಾಯಣಪುರ ಎಂಬ ದೈವೀಕ ಗ್ರಾಮದ ದಲಿತರ ಬರಡು ಹೊಲದಲ್ಲಿ ಒಂದೆರಡು ಅಡಿ ಆಳ ತೆಗೆದ ಗುಂಡಿಯಲ್ಲಿ ರಾಮಾನುಜಾಚಾರ್ಯರ ಕಾಲದಿಂದಲೂ ತೀರ್ಥೋದ್ಭವವಾಗುವ ಪವಾಡ ನಡೆಯುತ್ತಾ ಬಂದಿದೆ. ಪ್ರತಿ ವರ್ಷ ವೈರಮುಡಿ ಬ್ರಹ್ಮೋತ್ಸವದ ಕೊನೇ ದಿನವಾದ ತೀರ್ಥ ಸ್ಥಾನದಂದು ಅಚ್ಚರಿಯ ಈ ಪವಾಡ ನಡೆಯುತ್ತಾ ಬಂದಿದೆ.
ಶ್ರೀಚೆಲುವನಾರಾಯಣ ಸ್ವಾಮಿ ದರ್ಶನ ಹಾಗೂ ಅನುಗ್ರಹಕ್ಕೆ ಪ್ರಶಸ್ತ ದಿನವಾದ ಶನಿವಾರ ತೀರ್ಥಸ್ನಾನ ಬಂದಿದ್ದು, ಪವಾಡದ ನಿರೀಕ್ಷೆಯಲ್ಲಿ ಭಕ್ತರು ಹಾಗೂ ಜಮೀನಿನ ಮಾಲೀಕರಿದ್ದಾರೆ.ಶನಿವಾರ ತೀರ್ಥೋದ್ಭವ ಹಿನ್ನೆಲೆಯಲ್ಲಿ ಮಾಹಿತಿ ನೀಡಿದ ಹೊಲದ ಮಾಲೀಕರಾದ ದಲಿತ ಜನಾಂಗದ ಕುಮಾರ್ ಮತ್ತು ಶ್ರೀಧರ್ ವೈರಮುಡಿ ಜಾತ್ರಾ ಮಹೋತ್ಸವದ ತಿರ್ಥಸ್ನಾನದಂದು ಈ ಪವಾಡ ನಡೆಯುತ್ತಾ ಬಂದಿದೆ. ನಾವೆಲ್ಲಾ ಸೇರಿ ಚೆಲುವನಾರಾಯಣನ ಫೋಟೋ ಇಟ್ಟು ಚಪ್ಪರ ಹಾಕಿ ಪಾನಕ, ಕೋಸಂಬರಿ ಮಾಡುತ್ತೇವೆ. ವೈರಮುಡಿ ಉತ್ಸವ ಮುಗಿಯುತ್ತಿದ್ದಂತೆ ತೀರ್ಥ ಬರುವ ಹೊಲದ ಜಾಗದಲ್ಲಿ ಪಸಿಮೂಡುತ್ತದೆ. ಆ ಸ್ಥಳದಲ್ಲಿ ಎರಡು ಅಡಿ ಗುಂಡಿ ತೆಗೆಯುತ್ತೇವೆ. ತೀರ್ಥಸ್ನಾನ ಆಗುವ ವೇಳೆ ನಾವು ತೆಗೆದ ಗುಂಡಿಯಲ್ಲಿ ಅಚ್ಚ ಕರ್ಪೂರದ ವಾಸನೆ ಇರುವ ತೀರ್ಥ ಶೇಖರವಾಗುತ್ತಾ ಗುಂಡಿ ತುಂಬುತ್ತದೆ. ತೀರ್ಥ ತೆಗೆದರೆ ಅಷ್ಟೇ ಪ್ರಮಾಣದ ತೀರ್ಥ ಮತ್ತೆ ಶೇಖರಣೆಯಾಗುತ್ತದೆ. ಈ ಅಚ್ಚರಿ ವೀಕ್ಷಿಸಲು ನೂರಾರು ಭಕ್ತರು, ಗಣ್ಯರು ಭೇಟಿ ನೀಡುತ್ತಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಬರಡು ಹೊಲದಲ್ಲಿ ತೀರ್ಥೋದ್ಭವವಾಗುವ ಮಾಹಿತಿ ನೀಡಿದಾಗ ಶನಿವಾರ ನಾರಾಯಣಪುರದ ಗ್ರಾಮಕ್ಕೆ ಭೇಟಿ ನೀಡಿ ತೀರ್ಥೋದ್ಭವ ಪವಾಡವನ್ನು ವೀಕ್ಷಿಸುವುದಾಗಿ ತಿಳಿಸಿದ್ದಾರೆ.