ಕನ್ನಡಪ್ರಭ ವಾರ್ತೆ ತುಮಕೂರು
ಡಾ.ಬಿ.ಆರ್.ಅಂಬೇಡ್ಕರ್ ಅವರು ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ಭೇಟಿ ಕೊಟ್ಟು 100 ವರ್ಷ ತುಂಬಿದ ಹಿನ್ನೆಲೆ ರಾಜ್ಯ ಬಿಜೆಪಿ ಬೆಂಗಳೂರಿನಿಂದ ನಿಪ್ಪಾಣಿಗೆ ಹಮ್ಮಿಕೊಂಡಿರುವ ಭೀಮ ಹೆಜ್ಜೆ- 100 ರಥಯಾತ್ರೆ ಶುಕ್ರವಾರ ನಗರಕ್ಕೆ ಆಗಮಿಸಿದಾಗ ಜಿಲ್ಲಾ ಬಿಜೆಪಿಯಿಂದ ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಅವರ ನೇತೃತ್ವದಲ್ಲಿ ಕ್ಯಾತ್ಸಂದ್ರ ಟೋಲ್ ಬಳಿಯಿಂದ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಬೈಕ್ ರ್‍ಯಾಲಿ ಮೂಲಕ ರಥಯಾತ್ರೆಯನ್ನು ಸ್ವಾಗತಿಸಿ ನಗರಕ್ಕೆ ಕರೆ ತಂದರು.
ನಂತರ ಬಿಜಿಎಸ್ ವೃತ್ತದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಸಂಸದ ಮುನಿಸ್ವಾಮಿ, 1925 ಏಪ್ರಿಲ್ 10- 11ರಂದು ಅಂಬೇಡ್ಕರ್ ಅವರು ಶೋಷಿತ ಸಮಾಜವನ್ನು ಸಂಘಟಿಸಿ ಅವರನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಶೋಷಣೆಗಳಿಂದ ಮುಕ್ತಗೊಳಿಸಲು ಮೊದಲ ಬಾರಿಗೆ ಸಂಘಟಿತ ಪ್ರಯತ್ನ ಮಾಡಿದರು. ಅದರ ಸ್ಮರಣಾರ್ಥ ಭೀಮ ಹೆಜ್ಜೆ ರಥಯಾತ್ರೆ ಮಾಡಲಾಗುತ್ತಿದೆ ಎಂದರು.ಮಹಾತ್ಮಗಾಂದಿಯವರು ಬೆಳಗಾವಿಯ ಎಐಸಿಸಿ ಅಧಿವೇಶನ ಮಾಡಿದರೆಂದು ಹೇಳಿ ಕಾಂಗ್ರೆಸ್‌ನವರು ಸಾರ್ವಜನಿಕರ ಹಣದಿಂದ ಅಧಿವೇಶನ ಮಾಡಿದರು. ಅವರಿಗೆ ಅಂಬೇಡ್ಕರ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಶಾಸಕ ಬಿ.ಸುರೇಶ್‌ಗೌಡರು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಮಿಸಲಾಗಿದ್ದ 38 ಸಾವಿರ ಕೋಟಿ ರು.ಗಳನ್ನು ನುಂಗಿಹಾಕಿದೆ. ಅಭಿವೃದ್ಧಿ ನಿಗಮಗಳಿಗೂ ಬಿಡಿಗಾಸು ಕೊಟ್ಟಿಲ್ಲ. ಅಂಬೇಡ್ಕರ್ ಹೆಸರು ಹೇಳಿಕೊಂಡು ದಲಿತರ ಮತ ಪಡೆಯುವ ಕಾಂಗ್ರೆಸ್ ದಲಿತ ವರ್ಗದ ಏಳಿಗೆಗೆ ಏನನ್ನೂ ಮಾಡದೆ ಅನ್ಯಾಯ ಮಾಡುತ್ತಲೇ ಬಂದಿದೆ. ಅಂಬೇಡ್ಕರ್‌ಗೆ ಮಾಡಿದ ಅವಮಾನವನ್ನೇ ಕಾಂಗ್ರೆಸ್‌ನವರು ದಲಿತರಿಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರಿಬ್ಬರೂ ಮಹಾನ್ ನಾಯಕರು. ಈ ನಾಯಕರು ಜೀವಂತವಾಗಿದ್ದಾಗ ಅವರನ್ನು ಅಪಮಾನಿಸಿ, ಈಗ ಅಧಿಕಾರಕ್ಕಾಗಿ ಆ ನಾಯಕರನ್ನು ಕಾಂಗ್ರೆಸ್‌ನವರು ಬಳಸಿಕೊಳ್ಳುತ್ತಿದ್ದಾರೆ ಎಂದರು.
ಅಂಬೇಡ್ಕರ್ ಅವರಿಗೆ ಬಿಜೆಪಿ ಅಂದಿನಿಂದ ಇಂದಿನವರೆಗೂ ಗೌರವಕೊಟ್ಟಿದೆ. ದಲಿತರ ಅಭಿವೃದ್ಧಿಗೆ ನರೇಂದ್ರ ಮೋದಿಯವರ ಸರ್ಕಾರ ಕಟಿಬದ್ಧವಾಗಿದೆ. ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನದ ನೂರನೇ ವರ್ಷದ ನೆನಪು ಮಾಡಿಕೊಂಡ ಕಾಂಗ್ರೆಸ್ ನವರಿಗೆ ಅಂಬೇಡ್ಕರ್ ಅವರು ನಿಪ್ಪಾಣಿಗೆ ಬಂದ ನೂರು ವರ್ಷದ ನೆನಪು ಮಾಡಿಕೊಳ್ಳಲಿಲ್ಲ, ಅಧಿವೇಶನದಲ್ಲಿ ಬಿಜೆಪಿ ಶಾಸಕರು ಸರ್ಕಾರಕ್ಕೆ ನೆನಪು ಮಾಡಿದರೂ ಕಾಂಗ್ರೆಸ್‌ನವರಿಗೆ ಅಂಬೇಡ್ಕರ್ ಬೇಕಾಗಿರಲಿಲ್ಲ ಎಂದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಕಾಂಗ್ರೆಸ್‌ನವರು ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ ಬಗ್ಗೆ ಬಿಜೆಪಿ ನಿರಂತರವಾಗಿ ಕಾರ್ಯಕ್ರಮ ಮಾಡಿಕೊಂಡು ಜನರಿಗೆ ತಿಳಿಸುತ್ತಾ ಬಂದಿದೆ. ನೂರು ವರ್ಷಗಳ ಹಿಂದೆ ಅಂಬೇಡ್ಕರ್ ಅವರು ನಿಪ್ಪಾಣಿಯಲ್ಲಿ ಹಿತಕಾರಿಣಿ ಸಭಾದ ಅಧಿವೇಶನದಲ್ಲಿ ಭಾಗವಹಿಸಿದ್ದರು. ಶಿಕ್ಷಣ ಮತ್ತು ವಸತಿ ಶಾಲೆಯ ಬಗ್ಗೆ ಮಾತನಾಡಿದ್ದರು. ಈ ಐತಿಹಾಸಿಕ ಭೀಮ ಹೆಜ್ಜೆಗೆ ಶತಮಾನದ ಸಂಭ್ರಮ ಆಚರಿಸಲಾಗುತ್ತಿದೆ ಎಂದರು.
ಎಸ್.ಸಿ.ಮೋರ್ಚಾ ರಾಜ್ಯ ಅಧ್ಯಕ್ಷ ಸಿಮೆಂಟ್ ಮಂಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌದಾಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಎಸ್ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಚ್.ಎ.ಆಂಜನಪ್ಪ, ಮುಖಂಡರಾದ ಬಿ.ಎಚ್.ಅನಿಲ್ ಕುಮಾರ್, ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ನಗರ ಅಧ್ಯಕ್ಷ ಧನುಷ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಮುಖಂಡರಾದ ಟಿ.ಎಚ್.ಹನುಮಂತರಾಜು ಮೊದಲಾದವರು ಭಾಗವಹಿಸಿದ್ದರು.ನಂತರ ಬೈಕ್ ರ್‍ಯಾಲಿ ಮೂಲಕ ಭೀಮ ಹೆಜ್ಜೆ ರಥಯಾತ್ರೆಯನ್ನು ಶಿರಾ ಮಾರ್ಗವಾಗಿ ಬೀಳ್ಕೊಡಲಾಯಿತು.