ಸಮಾಜದ ಸ್ವಾಸ್ಥ್ಯ ಕಾಪಾಡಲು ರಾಸಾಯನಿಕ ಮುಕ್ತ ಬೆಳೆ ಅವಶ್ಯ: ಡೀಸಿ ಶ್ರೀರೂಪಾ

KannadaprabhaNewsNetwork |  
Published : Jan 18, 2026, 01:45 AM IST
'ಸಮಾಜದ ಸ್ವಾಸ್ಥ್ಯ ಕಾಪಾಡಲು ರಾಸಾಯನಿಕ ಮುಕ್ತ ಬೆಳೆ ಅವಶ್ಯ | Kannada Prabha

ಸಾರಾಂಶ

ರೈತ ಬೆಳೆದ ಅರ್ಧದಷ್ಟು ಬೆಳೆಗಳನ್ನು ಉತ್ಪಾದಕರು ಇಟ್ಟುಕೊಂಡು ಉಳಿದರ್ಧ ಉತ್ಪನ್ನಗಳನ್ನು ರೈತ ಉತ್ಪನ್ನ ಕಂಪನಿಗೆ ಸರಬರಾಜು ಮಾಡಬೇಕಾಗಿದೆ. ಇದರಲ್ಲಿ ಈ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಜೊತೆಗೆ ಬೆಳೆಗಾರರಿಗೆ ಹೆಚ್ಚಿನ ಲಾಭ ದೊರಕುವಂತೆ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸಮಾಜದ ಸ್ವಾಸ್ಥ್ಯ ಕಾಪಾಡಲು ರಾಸಾಯನಿಕ ಮುಕ್ತ ಬೆಳೆಗಳ ಅವಶ್ಯಕತೆ ಹೆಚ್ಚಾಗಬೇಕಾಗಿದೆ ಎಂದು ನೂತನ ಜಿಲ್ಲಾಧಿಕಾರಿ ಶ್ರೀರೂಪಾ ಹೇಳಿದರು.

ತಾಲೂಕಿನ ಕಡತಾಳಕಟ್ಟೆಹುಂಡಿ ಗ್ರಾಮದ ಮಹದೇವಪ್ರಸಾದ್ ರ ಜಮೀನಿನಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಆಯೋಜಿಸಿದ್ದ ರೈತರ ಗುಂಪು ಬೇಸಾಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ರಾಸಾಯನಿಕ ಮುಕ್ತ ಬಿತ್ತನೆ ಮಾಡಿದ ಬಳಿಕ ಮಾತನಾಡಿದರು.

ಕೋರೋನಾ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಪಾಠಗಳನ್ನು ಕಲಿತಿದ್ದಾರೆ. ಊರು ಬಿಟ್ಟು ಪಟ್ಟಣಕ್ಕೆ ಹೋಗಿದ್ದವರು ಸ್ವಗ್ರಾಮಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದನ್ನು ಮೆಲಕು ಹಾಕಿದರು.

ಮತ್ತೆ ಪಟ್ಟಣಕ್ಕೆ ಮರಳುವಾಗ ತಾವು ಬೆಳೆದಿದ್ದ ತರಕಾರಿ ಹಾಗೂ ಬೆಳೆಗಳನ್ನು ಕೊಂಡೊಯ್ಯುವ ಮೂಲಕ ರಾಸಾಯನಿಕಯುಕ್ತ ಬೆಳೆಗಳಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದರು.

ಸಾವಯವ ಉತ್ಪನ್ನಗಳಿಗೆ ಬೇಡಿಕೆ ಇರುವ ಕಾರಣ ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಿಲ್ಲ ಹಾಗೂ ಲಾಭದಾಯಕವಾಗಲಿದೆ. ಹೆಚ್ಚಿನವರು ಸಂಪೂರ್ಣ ಸಾವಯವ ಮತ್ತು ನಾಟಿ ಹಸುಗಳ ಉತ್ಪನ್ನಗಳ ಬಳಕೆ ಮಾಡಲು ಆರಂಭಿಸಿದ್ದಾರೆ ಎಂದರು.

ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರುಸೇನೆ ಆರಂಭಿಸಿರುವ ಗುಂಪು ಬೇಸಾಯ ಪದ್ಧತಿ ಉತ್ತಮ ಪರಿಣಾಮ ಬೀರಲಿದೆ ಎಂದು ಜಿಲ್ಲಾಧಿಕಾರಿ ಇದೇ ಸಮಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮೂಹಿಕ ನಾಯಕತ್ವದ ರೈತಸಂಘದ ರಾಜ್ಯ ಸಮಿತಿ ಸದಸ್ಯ ಹೊನ್ನೂರು ಪ್ರಕಾಶ್ ಮಾತನಾಡಿ, ರಾಜ್ಯ ರೈತ ಸಂಘದ ಸ್ವಾಭಿಮಾನ ಹಾಗೂ ಸ್ಥಳೀಯ ಬಿತ್ತನೆ ಬೀಜಗಳ ಸಂರಕ್ಷಣೆಗೆ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘವು ಗುಂಪು ಬೇಸಾಯ ಪದ್ಧತಿಯಲ್ಲಿ ಬೆಳೆಬೆಳೆಯಲು ಮುಂದಾಗಿದೆ ಎಂದರು.

ಪ್ರತಿ ಗ್ರಾಮಗಳಲ್ಲಿ ಸಂಘದ ಆಯ್ದ ಐದು ರೈತರ ಜಮೀನುಗಳಲ್ಲಿ ೨೦ ಗುಂಟೆ ಪ್ರದೇಶದಲ್ಲಿ ರಾಸಾಯನಿಕ ಮುಕ್ತ ಹಾಗೂ ಸಾವಯವ ಪದ್ಧತಿಯಲ್ಲಿ ಗುಂಪಾಗಿ ಬೇಸಾಯ ಮಾಡಲಾಗುವುದು. ಇದರಲ್ಲಿ ಕಬ್ಬು, ಬಾಳೆ, ಅರಿಶಿಣ, ಸೊಪ್ಪು, ತರಕಾರಿ ಮುಂತಾದ ಎಲ್ಲರಿಗೂ ಬೇಕಾದ ಬೆಳೆ ಬೆಳೆಯುವ ಮೂಲಕ ಬಳಕೆದಾರರಿಗೆ ವಿಷಮುಕ್ತ ಆಹಾರ ನೀಡಲಾಗುವುದು ಎಂದರು.

ರೈತ ಬೆಳೆದ ಅರ್ಧದಷ್ಟು ಬೆಳೆಗಳನ್ನು ಉತ್ಪಾದಕರು ಇಟ್ಟುಕೊಂಡು ಉಳಿದರ್ಧ ಉತ್ಪನ್ನಗಳನ್ನು ರೈತ ಉತ್ಪನ್ನ ಕಂಪನಿಗೆ ಸರಬರಾಜು ಮಾಡಬೇಕಾಗಿದೆ. ಇದರಲ್ಲಿ ಈ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಜೊತೆಗೆ ಬೆಳೆಗಾರರಿಗೆ ಹೆಚ್ಚಿನ ಲಾಭ ದೊರಕುವಂತೆ ಮಾಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕಿ ಸುಷ್ಮಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಡಿವೈಎಸ್‌ಪಿ ಸ್ನೇಹಾರಾಜ್, ತೆರಕಣಾಂಬಿ ಸಬ್ ಇನ್ಸ್ ಪೆಕ್ಟರ್ ಕೆ.ಎಂ.ಮಹೇಶ್ ಸೇರಿದಂತೆ ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮಣ್ಣ ಖಂಡ್ರೆ ಸಮಾಜಮುಖಿ ಚಿಂತನೆಯಲ್ಲೇ ಬದುಕಿದವರು
ಅಂಬೇಡ್ಕರ್‌ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕ; ಶಾಸಕ ಗಣೇಶ್‌ ಪ್ರಸಾದ್