ಕನ್ನಡಪ್ರಭ ವಾರ್ತೆ, ಕೆ.ಆರ್.ಪೇಟೆ
ಪಟ್ಟಣದ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ಜೆಡಿಎಸ್ ಕಾರ್ಯಕರ್ತರ ಬೂತ್ ಮಟ್ಟದ ಸಭೆ ನಡೆಸಿ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬೇರುಗಳು ಪ್ರಬಲವಾಗಿವೆ. ಇದನ್ನು ಅಲುಗಾಡಿಸುವ ಶಕ್ತಿ ಯಾರಿಗೂ ಇಲ್ಲ. ಇದಕ್ಕೆ ಕಾರಣ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದರು.
ಜೆಡಿಎಸ್ ಮತದಾರರ ಪಕ್ಷ. ಕ್ಷೇತ್ರದ ಶಾಸಕನಾಗಿ ನಾನು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಮೂಲಕ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ. ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಕಾರ್ಯವೈಖರಿ ಮೆಚ್ಚಿ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಯುವ ಕಾರ್ಯಕರ್ತರು ಜೆಡಿಎಸ್ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದರು.ಯುವಕರ ಆಗಮನ ಪಕ್ಷದ ಶಕ್ತಿಯನ್ನು ಮತ್ತಷ್ಟು ವೃದ್ಧಿಸುತ್ತದೆ ಎಂದ ಶಾಸಕ ಎಚ್.ಟಿ.ಮಂಜು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ವಿರೋಧ ಪಕ್ಷದವರನ್ನು ಅತಿ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆ. ಅನುದಾನ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ಶಾಸಕರ ನಡುವೆ ತಾರತಮ್ಯ ಮಾಡುವ ಮೂಲಕ ಮತದಾರರನ್ನು ಅವಮಾನಿಸುತ್ತಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಪ್ರಬಲಗೊಳಿಸುವ ದೃಷ್ಟಿಯಿಂದ ಸದಸ್ಯರ ನೊಂದಣಿ ಮಾಡಲಾಗುತ್ತಿದೆ. ಆದ್ದರಿಂದ ತಾಲೂಕಿನ ಎಲ್ಲಾ ಮತದಾರ ಬಂಧುಗಳು ತಮ್ಮ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ತಾಲೂಕಿನ ಎಲ್ಲಾ ೨೬೧ ಬೂತ್‌ಗಳಲ್ಲಿಯೂ ಈ ಕೆಲಸವನ್ನು ನಾಳೆಯಿಂದಲೇ ಮಾಡಲು ಕಾರ್ಯಕರ್ತರು ಸಿದ್ಧರಿರಬೇಕು ಎಂದರು.
ಪಕ್ಷದ ಮುಖಂಡರಾದ ರಾಜೇನಹಳ್ಳಿ ಕುಮಾರಸ್ವಾಮಿ, ರಘು ಮುಂತಾದವರು ಪಕ್ಷದ ಕೆಲವು ಮುಖಂಡರು ಪಕ್ಷ ತ್ಯಜಿಸದೆ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಜೆಡಿಎಸ್ ಎಂದು ಹೇಳಿಕೊಂಡು ಪಕ್ಷಕ್ಕೆ ಹಾಗೂ ನಮ್ಮ ನೆಚ್ಚಿನ ಶಾಸಕ ಮಂಜುರವರಿಗೆ ಮುಜುಗರ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷ ವಿರೋಧಿಗಳಾದ ಕೆಲವರು ಕಾಂಗ್ರೆಸ್ ಮುಖಂಡರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದು ಜೆಡಿಎಸ್ ಪಕ್ಷದಲ್ಲಿ ಒಡಕು ಸೃಷ್ಟಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದರೂ ಜೆಡಿಎಸ್ ವರಿಷ್ಠರೆದುರು ನಾವು ಅಪ್ಪಟ ಜೆಡಿಎಸ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ದೂರಿದರು.ಸಭೆಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಕುರುಬಹಳ್ಳಿ ನಾಗೇಶ್, ಮುಖಂಡ ಹುಲ್ಲೇಗೌಡ, ತಾಪಂ ಮಾಜಿ ಸದಸ್ಯ ಮೋಹನ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಟಿಎಪಿಸಿಎಂಎಸ್ ನಿರ್ದೇಶಕ ಮಂಜುನಾಥ್, ದಿಲೀಪ್, ಜೆಡಿಎಸ್ ಹೋಬಳಿ ಘಟಕಗಳ ಅಧ್ಯಕ್ಷರಾದ ರವಿಕುಮಾರ್, ಬಸವಲಿಂಗಪ್ಪ, ಸ್ವಾಮಿಗೌಡ, ದಿಶಾ ಸಮಿತಿ ಸದಸ್ಯ ನರಸನಾಯಕ ಇತರರಿದ್ದರು.