ಹಳ್ಳಕ್ಕೆ ರಾಸಾಯನಿಕಯುಕ್ತ ತ್ಯಾಜ್ಯ ನೀರು: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

KannadaprabhaNewsNetwork | Published : Dec 13, 2024 12:46 AM

ಸಾರಾಂಶ

20 ದಿನಗಳ ಹಿಂದೆ ನಿರಂತರ ಐದು ದಿನ ರಾಸಾಯನಿಕಯುಕ್ತ ವ್ಯರ್ಥ ನೀರು ಹರಿದು ಬಂದಿತ್ತು.

ಕಂಪ್ಲಿ: ಕೆಪಿಟಿಸಿಎಲ್ ಘಟಕದ ರಾಸಾಯನಿಕಯುಕ್ತ ತ್ಯಾಜ್ಯ ನೀರು ಹಳ್ಳಕ್ಕೆ ಸೇರಿದ್ದರಿಂದ ಮೆಣಸಿನಕಾಯಿ ಬೆಳೆ ನಷ್ಟಕ್ಕೆ ಒಳಗಾಗುವ ಆತಂಕ ರೈತರಲ್ಲಿ ಹೆಚ್ಚಾಗಿದೆ. ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುವುದು ಎಂದು ಸುಗ್ಗೇನಹಳ್ಳಿ ಭಾಗದ ಮೆಣಸಿನಕಾಯಿ ಬೆಳೆದ ರೈತರು ಆಕ್ರೋಶ ಹೊರ ಹಾಕಿದ್ದಾರೆ.

ತಾಲೂಕಿನ ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಶ್ರೀರಾಮರಂಗಾಪುರ ಗ್ರಾಮದ ಬಳಿಯ ಪರಮಟಗಡ್ಡ (ಪಶ್ಚಿಮ), ನಡುಗಡ್ಡೆ ಏತ ನೀರಾವರಿ ನೀರಿಗೆ ಘಟಕದ ರಾಸಾಯನಿಕಯುಕ್ತ ತ್ಯಾಜ್ಯ ನೀರು ಸೇರಿ ಮೆಣಸಿನಕಾಯಿ ಬೆಳೆಗೆ ಹರಿಸಲಾಗುತ್ತಿದೆ. ಇದರಿಂದಾಗಿ ಮೆಣಸಿನಕಾಯಿ ಬೆಳೆಯ ಮೊಗ್ಗು, ಹೂ, ಕಾಯಿ ಉದುರುತ್ತಿದ್ದು, ಮೆಣಸಿನಕಾಯಿ ಬೆಳೆದ ರೈತರು ನಷ್ಟದ ಆತಂಕದಲ್ಲಿದ್ದಾರೆ.

ರಾಸಾಯನಿಕಯುಕ್ತ ತ್ಯಾಜ್ಯ ನೀರು ರಾಮಪ್ಪ ಹಳ್ಳ ಸೇರಿ ನೀರಾವರಿಯ ಹಳ್ಳದ ನೀರಿಗೆ ಕಳೆದ ಮೂರು ದಿನಗಳಿಂದ ಹರಿದು ಬರುತ್ತಿರುವುದರಿಂದ ನೀರು ಹಾಲಿನಂತೆ ಮಂದ ಬಣ್ಣದ್ದಾಗಿದೆ. 20 ದಿನಗಳ ಹಿಂದೆ ನಿರಂತರ ಐದು ದಿನ ರಾಸಾಯನಿಕಯುಕ್ತ ವ್ಯರ್ಥ ನೀರು ಹರಿದು ಬಂದಿತ್ತು. ಈ ನೀರನ್ನು ಆಗ ಮೆಣಸಿನಕಾಯಿ ಬೆಳೆಗೆ ಹಾಯಿಸಲಾಗಿತ್ತು. ಇದೀಗ ಮೆಣಸಿನಕಾಯಿ ಬೆಳೆ ಮೇಲೆ ಪರಿಣಾಮ ಬೀರಿದ್ದು ಕುಡಿ, ಎಲೆ ಕಪ್ಪಾಗುತ್ತಿದೆ. ಹೂ, ಕಾಯಿ, ಮೊಗ್ಗು ಉದುರುತ್ತಿವೆ. ಮದ್ದು ಸಿಂಪಡಿಸಿದರೂ ಬೆಳೆ ನಿಲ್ಲುತ್ತಿಲ್ಲ. ಈಗಾಗಲೇ ಎಕರೆಗೆ ₹2 ಲಕ್ಷತನಕ ಖರ್ಚು ಮಾಡಿದ್ದೇವೆ. ಇನ್ನೇನು 25-30 ದಿನದಲ್ಲಿ ಕೊಯ್ಲಿಗೆ ಬರಲಿದೆ. ರಾಸಾಯನಿಕ ನೀರು ಸೇರಿದ್ದರಿಂದ ಎಕರೆ ಮೆಣಸಿನಕಾಯಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೆಪಿಟಿಸಿಎಲ್ ರಾಸಾಯನಿಕಯುಕ್ತ ನೀರನ್ನು ಹಳ್ಳಕ್ಕೆ ಸೇರಿಸಬಾರದು. ಇದನ್ನೇ ಮುಂದುವರಿಸಿದಲ್ಲಿ, ಮೆಣಸಿನಕಾಯಿ ಇಳುವರಿ ಮೇಲೆ ದುಷ್ಪರಿಣಾಮ ಬೀರಿದಲ್ಲಿ ಕೆಪಿಟಿಸಿಎಲ್ ಎದುರು ಪ್ರತಿಭಟಿಸಲಾಗುವುದು ಎಂದು ರೈತರಾದ ಲೇಪಾಕ್ಷಿ, ಮಂಜುನಾಥ, ಎಲ್.ರವಿ, ಎಸ್.ಆರ್.ಸುರೇಶಗೌಡ, ಶ್ರೀನಾಥ, ಎಸ್.ಆರ್.ಶಂಕರಗೌಡ, ಟಿ.ವಿಶ್ವನಾಥ, ಪ್ರಭಾಕರ ಇತರರು ಎಚ್ಚರಿಸಿದ್ದಾರೆ.

Share this article