ಚೆನ್ನಮ್ಮನ ಧೈರ್ಯ, ಸಾಹಸ ಮಹಿಳೆಗೆ ಆದರ್ಶ: ಶಶಿಕಾಂತ್ ಶಿವಪೂರೆ

KannadaprabhaNewsNetwork | Published : Oct 24, 2024 12:33 AM

ಸಾರಾಂಶ

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ಹೆಣ್ಣು ಮಕ್ಕಳು ರಾಣಿ ಚೆನ್ನಮ್ಮ ಆದರ್ಶ, ತತ್ವಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಜಾರಿಗೊಳಿಸಬೇಕು ಎಂದು ಶಶಿಕಾಂತ್ ಶಿವಪೂರೆ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರು ತೋರಿದಂತಹ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾಗಿದೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಅವರು ಹೇಳಿದರು.

ಅವರು ಅ.೨೩ರ ಬುಧವಾರದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಿತ್ತೂರು ರಾಣಿ ಚೆನ್ನಮ್ಮ ಅವರು ರಾಜ ಮನೆತನದವರಾಗಿದ್ದರಿಂದ ಬಾಲ್ಯದಿಂದಲೇ ಕುದುರೆ ಸವಾರಿ, ಕತ್ತಿ ಬಳಸುವ ಪರಿಯ ಬಗ್ಗೆ ತರಬೇತಿ ಪಡೆದಿದ್ದರು. ಚೆನ್ನಮ್ಮ ಅವರು ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ಹೆಣ್ಣು ಮಕ್ಕಳು ರಾಣಿ ಚೆನ್ನಮ್ಮ ಆದರ್ಶ, ತತ್ವಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಜಾರಿಗೊಳಿಸಬೇಕೆಂದರು.

ಈ ವೇಳೆ ರಾಯಚೂರು ತಹಸೀಲ್ದಾರ್ ಸುರೇಶ್ ಅವರು ಮಾತನಾಡಿ, ರಾಣಿ ಚೆನ್ನಮ್ಮ ಸೇರಿದಂತೆ ಮಹಾನ್ ಧೀರ ದಿಟ್ಟ ಮಹಿಳೆಯರ ಮಾರ್ಗವನ್ನು ಅನುಸರಿಸಬೇಕು. ಯುವಕ-ಯುವತಿಯರು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

ಬ್ರಿಟಿಷ್ ಸರ್ಕಾರ ಜಾರಿಗೊಳಿಸಿದ್ದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯನ್ನು ವಿರೋಧಿಸಿದ ರಾಣಿ ಚನ್ನಮ್ಮ ಅವರು ಬ್ರಿಟಿಷರಿಗೆ ಸಲ್ಲಿಸಬೇಕಾಗಿದ್ದ ಕಪ್ಪ ಕಾಣಿಕೆ ಕೊಡುವುದನ್ನು ನಿರಾಕರಿಸಿದ್ದ ವೀರ ಮಹಿಳೆ ಎಂದೂ ಬಣ್ಣಿಸಿದರು.

ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆ ಚೆನ್ನಮ್ಮ. ದೇಶದ ಜನ ತಾವಿರುವ ಪ್ರದೇಶದಲ್ಲಿ ಗೌರವದಿಂದ ಬದುಕ ಬೇಕಾದರೇ ಸ್ವಾತಂತ್ರ‍್ಯ ಬಹಳ ಮುಖ್ಯ ಎಂದು ಅವರು ಚೆನ್ನಾಗಿ ತಿಳಿದಿದ್ದರು ಎಂದವರು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಯರಾಮ, ಸಮಾಜದ ಮುಖಂಡರಾದ ದಾನಮ್ಮ, ಮಹಿಳಾ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಈರಮ್ಮ ಸೇರಿದಂತೆ ಇತರರು ಇದ್ದರು.

ಬೀದರಿನಲ್ಲಿ ರಾಣಿ ವೇಷದಲ್ಲಿ ಭವ್ಯ ಮೆರವಣಿಗೆ

ಬೀದರ್: ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ನಗರದಲ್ಲಿ ಬುಧವಾರ ಅಲಂಕೃತ ವಾಹನದಲ್ಲಿ ಚನ್ನಮ್ಮ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.ಪುಷ್ಪಗಳಿಂದ ಸಿಂಗರಿಸಿದ್ದ ವಾಹನದಲ್ಲಿ ಚನ್ನಮ್ಮ ಅವರ ಬೃಹತ್ ಭಾವಚಿತ್ರ ಇಡಲಾಗಿತ್ತು. ವಾಹನದ ಆಚೆ-ಈಚೆ ಎರಡು ಕುದುರೆಗಳ ಮೇಲೆ ಚನ್ನಮ್ಮ ವೇಷ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಕುಳಿತಿದ್ದ ರೋಶಿನಿ ಮಾಳಗೆ ಹಾಗೂ ಸೌಮ್ಯ ಮುಗಟೆ ಗಮನ ಸೆಳೆದರು. 200ನೇ ಜಯಂತಿ ಅಂಗವಾಗಿ 200 ಮಕ್ಕಳು ಚನ್ನಮ್ಮ ಅವರ ವೇಷ ಧರಿಸಿ ಪಾಲ್ಗೊಂಡು, ಮೆರವಣಿಗೆಗೆ ವಿಶೇಷ ಕಳೆ ನೀಡಿದರು. ಡಂಬಲ್ಸ್, ಲೇಜಿಮ್, ಶಾಲಾ ಬ್ಯಾಂಡ್ ಮೊದಲಾದವು ಮೆರವಣಿಗೆಯ ಆಕರ್ಷಣೆಯಾಗಿದ್ದವು.

ಬಸವನಗರ ವಿಕಾಸ ಸಮಿತಿ, ಕಿತ್ತೂರು ಚನ್ನಮ್ಮ ಬಡಾವಣೆ, ವಿದ್ಯಾನಗರ ವಿಕಾಸ ಸಮಿತಿ ಹಾಗೂ ಹಾರೂರಗೇರಿ ಬಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಬಸವನಗರದ ಬಸವೇಶ್ವರ ದೇವಸ್ಥಾನದ ಬಳಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ವಸ್ತ್ರದ್ ಹಾಗೂ ಬಿ.ವಿ. ಭೂಮರಡ್ಡಿ ಕಾಲೇಜು ಪ್ರಾಚಾರ್ಯ ಡಾ.ವಿಠ್ಠಲರೆಡ್ಡಿ ಜಂಟಿಯಾಗಿ ಚಾಲನೆ ನೀಡಿದರು. ಅಲ್ಲಿಂದ ಮೆರವಣಿಗೆ ಬಸವನಗರ, ಕಾಳಿದಾಸ ನಗರ ಮಾರ್ಗವಾಗಿ ಸಾಗಿ, ರಾಣಿ ಚನ್ನಮ್ಮ ವೃತ್ತಕ್ಕೆ ತಲುಪಿ ಸಮಾರೋಪಗೊಂಡಿತು. ನಂತರ ವೃತ್ತದಲ್ಲಿ ವೇದಿಕೆ ಸಮಾರಂಭ ಜರುಗಿತು.--

ಚಿತ್ರ 23ಬಿಡಿಆರ್59: ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಪ್ರಯುಕ್ತ ಬೀದರ್‌ನಲ್ಲಿ ಅಲಂಕೃತ ವಾಹನದಲ್ಲಿ ಚನ್ನಮ್ಮ ಅವರ ಭಾವಚಿತ್ರದ ವೈಭವದ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ವೇಷಧಾರಿ ಮಕ್ಕಳು ಗಮನ ಸೆಳೆದರು.

Share this article