ಮುಂಡರಗಿ: ಬ್ರಿಟೀಷರ ವಿರುದ್ಧ ಹೋರಾಟ ಮಾಡುವ ಮೂಲಕ ದೇಶ ಬಿಟ್ಟು ಓಡುವಂತೆ ಮಾಡಿದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಎಂದು ಮುಂಡರಗಿ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.
ಸಾಕಷ್ಟು ರಾಜಮನೆತನಗಳ ವಿರುದ್ಧ ಬ್ರಿಟೀಷರು ಹೋರಾಟ ಮಾಡಿ ಅವರ ರಾಜ್ಯ ವಶಪಡಿಸಿಕೊಂಡು ಅವರನ್ನು ಶರಣಾಗತಿ ಮಾಡಿಕೊಂಡಿದ್ದರು. ಕಿತ್ತೂರು ಸಂಸ್ಥಾನದ ಮೇಲೆ ದಂಡೆತ್ತಿ ಬಂದಾಗ ದಿಟ್ಟತನದಿಂದ ಹೋರಾಡಿದ ಚೆನ್ನಮ್ಮ ಬ್ರಿಟೀಷರನ್ನು ದೇಶಬಿಟ್ಟು ತೊಲಗಿಸಿದ್ದರು. ಇವರ ಸಾಧನೆ ಗೌರವಿಸುವ ಉದ್ದೇಶದಿಂದ ಸರ್ಕಾರ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇವರ ಜಯಂತ್ಯುತ್ಸವ ಆಚರಿಸುವಂತೆ ಆದೇಶಿಸಿದೆ. ಚೆನ್ನಮ್ಮನವರು ನಾಡಿನ ನೆಲ, ಜಲ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಇಂದು ಕಿತ್ತೂರಿನಲ್ಲಿ ಜರುಗುವ ಸರ್ಕಾರದ ಕಾರ್ಯಕ್ರಮದಲ್ಲಿ ಅವರ ಹೆಸರಿನ ಅಂಚೆ ಚೀಟಿ ಬಿಡುಗಡೆ ಮಾಡಲಾಗುತ್ತಿದೆ. ಇಂದಿನ ಮಹಿಳೆಯರು ಅವರ ತತ್ವಾದರ್ಶ, ಧೈರ್ಯವನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಚೆನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗೂ ಬಿಲ್ಲು ವಿದ್ಯೆ ಕರಗತ ಮಾಡಿಕೊಂಡಿದ್ದಳು. ಸ್ವಂತ ಮಕ್ಕಳಿಲ್ಲದ ರಾಣಿ ಚೆನ್ನಮ್ಮ ತನ್ನ ದತ್ತು ಮೊಮ್ಮಗನಿಗೆ ಪಟ್ಟ ಕಟ್ಟಿದಳು. ಅವರ ಧೈರ್ಯ ಮತ್ತು ಸಾಹಸ ಎಲ್ಲರೂ ಮೆಚ್ಚುವಂತದ್ದು ಎಂದರು.ಪುರಸಭೆ ಮಾಜಿ ಅಧ್ಯಕ್ಷ ಕವಿತಾ ಉಳ್ಳಾಗಡ್ಡಿ, ಪ್ರೊ.ಎ.ವೈ.ನವಲಗುಂದ ಸೇರಿದಂತೆ ಅನೇಕರು ಮಾತನಾಡಿದರು. ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಮೇಶಗೌಡ ಪಾಟೀಲ ಸ್ವಾಗತಿಸಿ, ಮಂಜುನಾಥ ಇಟಗಿ ನಿರೂಪಿಸಿದರು.