ಚೆರಿಯಪರಂಬು: ಮಳೆಗಾಲದಲ್ಲಿ ಪ್ರವಾಹ ಸಮಸ್ಯೆ ಸಾಮಾನ್ಯ!

KannadaprabhaNewsNetwork |  
Published : May 15, 2024, 01:38 AM IST
ಚಿತ್ರ : 14ಎಂಡಿಕೆ4 : ಚೆರಿಯಪರಂಬುವಿನಲ್ಲಿ ಪ್ರವಾಹ ಉಂಟಾಗಿರುವುದು.(ಫೈಲ್ ಫೋಟೋ) | Kannada Prabha

ಸಾರಾಂಶ

ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಗ್ರಾಮದಲ್ಲಿ ಪ್ರತಿ ವರ್ಷ ಮಳೆಗಾಲದ ಸಂದರ್ಭ ಪ್ರವಾಹ ಉಂಟಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಈ ಗ್ರಾಮದ ಜನರು ಮನೆ ಖಾಲಿ ಮಾಡಬೇಕಾದ ಅನಿವಾರ್ಯತೆ ಇನ್ನೂ ತಪ್ಪಿಲ್ಲ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಗ್ರಾಮದಲ್ಲಿ ಪ್ರತಿ ವರ್ಷ ಮಳೆಗಾಲದ ಸಂದರ್ಭ ಪ್ರವಾಹ ಉಂಟಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಈ ಗ್ರಾಮದ ಜನರು ಮನೆ ಖಾಲಿ ಮಾಡಬೇಕಾದ ಅನಿವಾರ್ಯತೆ ಇನ್ನೂ ತಪ್ಪಿಲ್ಲ.

ಚೆರಿಯಪರಂಬುವಿನಲ್ಲಿ ನದಿ ತಟದಲ್ಲಿ ಬಡವರು ಕಳೆದ ಹಲವಾರು ವರ್ಷಗಳಿಂದ ಸೂರು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ಈ ಭಾಗದಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯವಾಗಿದ್ದು, ಮಳೆಗಾಲದಲ್ಲಿ ಊರು ಬಿಡುವ ಪರಿಸ್ಥಿತಿ ಇದೆ. ಈ ಭಾಗದಲ್ಲಿ 100ಕ್ಕೂ ಅಧಿಕ ಮನೆಗಳಿದ್ದು, ಮಳೆಗಾಲದಲ್ಲಿ ನೀರಿನಿಂದ ಆವೃತ್ತಗೊಳ್ಳುತ್ತವೆ.

ಪ್ರತಿ ಬಾರಿ ನೋಟೀಸ್ ಮಾತ್ರ: ಮಳೆಗಾಲ ಆರಂಭವಾದರೆ ಸಾಕು ಚೆರಿಯಪರಂಬು ನಿವಾಸಿಗಳಿಗೆ ನಾಪೋಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಬಾರಿ ಕೂಡ ಮುನ್ನೆಚ್ಚರಿಕೆ ನೀಡುವ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಲಾಗುತ್ತದೆ. ಪ್ರವಾಹ ಬರುವ ಮುನ್ನವೇ ಕೆಲವರು ಮನೆ ಖಾಲಿ ಮಾಡುತ್ತಾರೆ. ಆದರೆ ದಿಕ್ಕು ತೋಚದೆ ಕೆಲವರು ಪ್ರವಾಹದಲ್ಲೇ ಸಿಲುಕುವ ಪರಿಸ್ಥಿತಿ ಉಂಟಾಗುತ್ತದೆ. ಪ್ರವಾಹ ಇಳಿಮುಖಗೊಂಡ ಬಳಿಕ ಮತ್ತೆ ಅದೇ ಮನೆಯಲ್ಲಿ ಬಂದು ನೆಲೆಸುತ್ತಾರೆ. ಎಮ್ಮೆಮಾಡು ಭಾಗದಲ್ಲಿ ಕೂಡ ಪ್ರವಾಹ ಉಂಟಾಗಿ ಗದ್ದೆ, ಮನೆಗಳು ಪ್ರವಾಹಕ್ಕೆ ತುತ್ತಾಗುತ್ತವೆ.

ಪ್ರವಾಹಕ್ಕೆ ಒಳಗಾಗುವ ರಸ್ತೆಗಳು:

ಭಾರಿ ಮಳೆಯಾದ ಸಂದರ್ಭ ನಾಪೋಕ್ಲು-ಕೊಟ್ಟಮುಡಿ, ಮಡಿಕೇರಿ-ಮುರ್ನಾಡುವಿನ ಬೊಳಿಬಾಣೆಯಲ್ಲಿ ಕೂಡ ಪ್ರವಾಹ ಆಗುತ್ತದೆ. ಕೊಟ್ಟಮುಡಿ ಜಂಕ್ಷನ್ ಬಳಿ ಕೂಡ ಮುಳುಗಡೆಯಾಗುತ್ತದೆ. ಎತ್ತರ ಮಾಡಬೇಕೆಂದು ಒತ್ತಾಯ ಆದರೂ ಕೂಡ ಮಾಡಲಾಗಿಲ್ಲ. ಬೆಟ್ಟಗೇರಿ-ನಾಪೋಕ್ಲು ರಸ್ತೆಯ ಮೇಲೆ ಪ್ರವಾಹ ಆದರೆ ನಾಪೋಕ್ಲು ಪಟ್ಟಣ ದ್ವೀಪದ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಸಂಚಾರಕ್ಕೂ ಅಡಚಣೆಯಾಗುತ್ತದೆ.

...................

ಪ್ರವಾಹ ಸಂತ್ರಸ್ತರಿಗಿಲ್ಲವೇ ಶಾಶ್ವತ ಪರಿಹಾರ?ಚೆರಿಯಪರಂಬು ಗ್ರಾಮದಲ್ಲಿ ಪ್ರತಿ ಬಾರಿ ಮಳೆಗಾಲದಲ್ಲಿ ಪ್ರವಾಹ ಆಗುತ್ತದೆ. ಮಳೆಗಾಲ ಮುಗಿದ ಬಳಿಕ ಬಹುತೇಕರು ಮತ್ತೆ ಅದೇ ಮನೆಗಳಲ್ಲಿ ನೆಲೆಸುತ್ತಾರೆ. ವಾಸಕ್ಕೆ ಯೋಗ್ಯವಲ್ಲ ಎಂದು ತಿಳಿದಿದ್ದರೂ ಕೂಡ ಬಹುತೇಕರು ಅಲ್ಲೇ ತಂಗುವುದು ಸಾಮಾನ್ಯವಾಗಿದೆ. ಆದ್ದರಿಂದ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಇತರೆ ಕಡೆಯಲ್ಲಿ ಶಾಶ್ವತವಾಗಿ ಮನೆ ನಿರ್ಮಾಣಮಾಡಿಕೊಡುವ ಮೂಲಕ ಸಂಬಂಧಿಸಿದವರು ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತರಬೇಕಾಗಿದೆ. ...............ನಾವು ಹಲವಾರು ವರ್ಷಗಳಿಂದ ಇಲ್ಲೇ ವಾಸವಿದ್ದೇವೆ. ಮಳೆ ಹೆಚ್ಚಾಗಿ ನದಿ ನೀರಿನ ಪ್ರವಾಹ ಉಂಟಾಗುತ್ತದೆ. ಈ ಸಂದರ್ಭ ಮನೆ ಖಾಲಿ ಮಾಡಿ ಎಂದು ನೋಟೀಸ್ ನೀಡುತ್ತಾರೆ. ಆದರೆ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ಆಗಿಲ್ಲ. ಆದ್ದರಿಂದ ಸಂತ್ರಸ್ತರಿಗೆ ಮನೆ ನೀಡಬೇಕು.

-ರಾಜೇಶ್ವರಿ, ಚೆರಿಯಪರಂಬು ನಿವಾಸಿ.

...............ಚೆರಿಯಪರಂಬುವಿನಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯ. ಈ ಸಂದರ್ಭ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಲ್ಲಿನವರಿಗೆ ಸೂಚನೆ ನೀಡಲಾಗುತ್ತದೆ. ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಗೆ ಜಾಗ ಹುಡುಕುವ ಪ್ರಯತ್ನ ನಡೆಯುತ್ತಿದೆ. ಮಳೆಗಾಲದಲ್ಲಿ ಬೆಟ್ಟಗೇರಿ-ನಾಪೋಕ್ಲು ರಸ್ತೆ ಸಂಪರ್ಕ ಕೂಡ ಕಡಿತಗೊಳ್ಳುತ್ತದೆ.

-ಚೋಂದಕ್ಕಿ, ಪಿಡಿಒ, ನಾಪೋಕ್ಲು ಗ್ರಾಮ ಪಂಚಾಯಿತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!