ಕನ್ನಡಪ್ರಭ ವಾರ್ತೆ ಮಡಿಕೇರಿ
ಅಂದು ಬೆಳಗ್ಗೆ 8.30ಕ್ಕೆ ಕಡಂಗ ಗಣಪತಿ ದೇವಸ್ಥಾನದ ಎದುರಿನಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡುವ ಮೂಲಕ ಉತ್ಸವ ಆರಂಭಗೊಳ್ಳಲಿದೆ. ಪೂರ್ವಾಹ್ನ 9.30ಕ್ಕೆ ಧ್ವಜಾರೋಹಣ ಮತ್ತು ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ನರಿಯಂದಡ ಗ್ರಾ.ಪಂ.ಅಧ್ಯಕ್ಷ ಪೆಮ್ಮಂಡ ಕೌಶಿ ಕಾವೇರಮ್ಮ, ನೌಕಾದಳದ ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ, ಯವಕಪಾಡಿ ನಿವೃತ್ತ ಶಿಕ್ಷಕ ಮಂಞಂಡ್ರ ರೇಖಾ ಉಲ್ಲಾಸ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಳಗ್ಗೆ 10 ಗಂಟೆಗೆ ವಿವಿಧ ಕ್ರೀಡಾಕೂಟ ಮತ್ತು ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ 1.30 ಕ್ಕೆ ಚೆಯ್ಯಂಡಾಣೆ ಮುಖ್ಯರಸ್ತೆಯಿಂದ ಶಾಲೆವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಆಕರ್ಷಕ ಹುಲಿವೇಷ ಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳ ಪ್ರದರ್ಶನ ಜರುಗಲಿದೆ ಎಂದು ನುಡಿದರು.ಮಧ್ಯಾಹ್ನ 2 ಗಂಟೆಗೆ ವಿಶೇಷ ಆಕರ್ಷಣೆಯ ಗಂಡಸರ ಹಗ್ಗಜಗ್ಗಾಟದ ಅಂತಿಮ ಪಂದ್ಯಾಟ ನಡೆಯಲಿದೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಅರೆಭಾಷೆ ಕುರಿತು ಉಪನ್ಯಾಸ, ಹಿರಿಯ ಸಾಧಕರಿಗೆ ಸನ್ಮಾನ, ಬಹುಮಾನಗಳ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಎ.ಎಸ್.ಪೊನ್ನಣ್ಣ ಸಾಧಕರನ್ನು ಸನ್ಮಾನಿಸಲಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಡಾ.ಮಂತರ್ ಗೌಡ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಚೆಯ್ಯಂಡಾಣೆಯಲ್ಲಿ ನಡೆಯುತ್ತಿರುವ ಗಡಿನಾಡ ಉತ್ಸವ ಎರಡನೆಯ ಕಾರ್ಯಕ್ರಮವಾಗಿದ್ದು, ಮೊದಲ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶ ಬಂದಡ್ಕ ಗ್ರಾಮದಲ್ಲಿ ಅ.27 ರಂದು ಬಹಳ ಅದ್ಧೂರಿಯಾಗಿ ಮತ್ತು ಯಶಸ್ವಿಯಾಗಿ ನಡೆದಿದೆ ಎಂದರು.
ಚೆಯ್ಯಂಡಾಣೆ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಬೆಳಿಯಂಡ್ರ ಮಾತನಾಡಿ, ಉತ್ಸವದಲ್ಲಿ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದರು.
ಹಗ್ಗ ಜಗ್ಗಾಟ, ಊರಿನವರಿಗೆ ಸೋಬಾನೆ ಹೇಳುವ ಸ್ಪರ್ಧೆ ನಡೆಯಲಿದೆ. ಈ ಆಟೋಟಗಳಲ್ಲಿ ಕೆದಮುಳ್ಳೂರು, ಕೊಡಂಜಗೇರಿ, ನರಿಯಂದಡ, ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಭಾಷಿಕರು ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.