ನದಿಗಳಿಗೂ ತಾಯಿಯಷ್ಟೇ ಕಾಳಜಿ ತೋರಿ ರಕ್ಷಿಸಬೇಕು: ಶಾಸಕ ಜ್ಞಾನೇಂದ್ರ

KannadaprabhaNewsNetwork | Published : Nov 7, 2024 11:52 PM
Follow Us

ಸಾರಾಂಶ

ನದಿ ನಮ್ಮನ್ನು ಹೆತ್ತ ತಾಯಿಯಷ್ಟೇ ಪವಿತ್ರವಾಗಿದೆ. ತಾಯಿಯನ್ನು ರಕ್ಷಿಸಿದಷ್ಟೇ ಹೊಣೆಗಾರಿಕೆಯಿಂದ ನದಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ನದಿ ನಮ್ಮನ್ನು ಹೆತ್ತ ತಾಯಿಯಷ್ಟೇ ಪವಿತ್ರವಾಗಿದೆ. ತಾಯಿಯನ್ನು ರಕ್ಷಿಸಿದಷ್ಟೇ ಹೊಣೆಗಾರಿಕೆಯಿಂದ ನದಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ ಹೊರಟಿರುವ ನಿರ್ಮಲ ತುಂಗಭದ್ರಾ ಪಾದಯಾತ್ರೆಯನ್ನು ಗುರುವಾರ ಬಸವಾನಿ ಸಮೀಪ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು, ಬಸವಾನಿ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ನದಿಗಳ ನೀರನ್ನು ಶುದ್ಧವಾಗಿಟ್ಟುಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಪ್ರಸ್ತುತ ನದಿ ನೀರನ್ನು ಅಶುದ್ಧಗೊಂಡು ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಾವುಗಳು ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಪಾದಯಾತ್ರೆ ನೇತೃತ್ವ ವಹಿಸಿರುವ ಪ್ರೊ. ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನು ವಿಕೃತಿಗೊಳಿಸುವ ಪ್ರಯತ್ನದ ಬಗ್ಗೆ ತಡೆಹಾಕುವ ಅಗತ್ಯವಿದೆ. ಕೃಷಿಗೆ ಬಳಸುವ ಕೀಟನಾಶಕ ಕೈಗಾರಿಕಾ ಮಾಲಿನ್ಯ ಮತ್ತು ಆಸ್ಪತ್ರೆ ತ್ಯಾಜ್ಯ ನೇರವಾಗಿ ನದಿಯನ್ನು ಸೇರುತ್ತದೆ. ಜನಜಾಗೃತಿಯ ಮೂಲಕ ಇದನ್ನು ತಡೆಯುವ ಪ್ರಯತ್ನ ಆಗಬೇಕಿದೆ ಎಂದರು.

ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಪ್ರತಿವರ್ಷ ಸರಾಸರಿ 1 ಕೋಟಿ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರು ಬಳಸುವ ನೀರನ್ನು ಶುದ್ಧಗೊಳಿಸುವ ಟ್ರೀಟ್ಮೆಂಟ್ ಪ್ಲಾಂಟ್ ಇಲ್ಲ. ಈ ಕಾರಣ ಎಲ್ಲರ ಮಲ-ಮೂತ್ರಗಳು ನೇರವಾಗಿ ತುಂಗಾ ನದಿಯನ್ನು ಸೇರುತ್ತದೆ. ಈ ಭೀಕರತೆಯನ್ನು ನಾವು ಅರ್ಥೈಸಿಕೊಳ್ಳುವ ಅಗತ್ಯವಿದೆ ಮತ್ತು ನದಿಯನ್ನು ರಕ್ಷಿಸಿದರೆ ಮಾತ್ರ ನದಿ ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ನಮ್ಮ ಮುಂದಿನ ಜನಾಂಗಕ್ಕೂ ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ಪರಿಸರ ರಕ್ಷಣೆ ಜನರ ಆರೋಗ್ಯ ಮತ್ತು ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಉತ್ತಮವಾದ ಕಾರ್ಯವಾಗಿದೆ. ಸಾಮೂಹಿಕವಾಗಿ ಇದರಲ್ಲಿ ಭಾಗವಹಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಹಿತಾಸಕ್ತಿ ಇರಬಾರದು ಎಂದರು.

ಬಸವಾನಿಗೆ ಆಗಮಿಸಿದ ಪಾದಯಾತ್ರೆಯನ್ನು ಬಸವಾನಿ ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಪಾಲ್ಗೊಂಡು ಸ್ವಾಗತಿಸಿದರು. ಸಭೆಯಲ್ಲಿ ತಹಸೀಲ್ದಾರ್ ಎಸ್. ರಂಜಿತ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಎಂ. ಶೈಲಾ ಬಸವರಾಜ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಬಸವಾನಿಯಿಂದ ಹೊರಟ ಪಾದಯಾತ್ರೆಯು ಗುರುವಾರ ಸಂಜೆ ತಾಲೂಕಿನ ಹೊಸ ಅಗ್ರಹಾರದಲ್ಲಿ ತಂಗಿದೆ. ಶುಕ್ರವಾರ ಬೆಳಗ್ಗೆ ಅಗ್ರಹಾರದಿಂದ ಹೊರಟು ಮುಳುಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಗಾ ಮಾಲತಿ ಸಂಗಮದ ಭೀಮನಕಟ್ಟೆಯಲ್ಲಿ ಪೂಜೆ ಕೈಗೊಂಡು, ತೀರ್ಥಹಳ್ಳಿ ಪಟ್ಟಣಕ್ಕೆ ಪಾದಯಾತ್ರೆ ಆಗಮಿಸಲಿದೆ.