ಕನ್ನಡಪ್ರಭ ವಾರ್ತೆ ಚಾಮರಾಜನಗರ ನಮ್ಮಲ್ಲಿ ಛಲ, ಗುರಿ ಇದ್ದರೆ, ಎಷ್ಟೇ ಕಷ್ಟವಾದರೂ ಸಾಧನೆ ಮಾಡಬಹುದು ಎಂದು ಜಿಲ್ಲೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ಹೇಳಿದರು.ನಗರದ ಮಹಾಮನೆಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಖೋಖೋ ಆಟಗಾರ್ತಿ ಚೈತ್ರಾ ಮತ್ತು ಭಾರತೀಯ ಯೋಧೆ ಡಿ.ಸಿ.ಮೌಲ್ಯ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು,ಪ್ರಸ್ತುತ ಸಂದರ್ಭದಲ್ಲಿ ಹೆಣ್ಣು ಮಕ್ಕಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದು, ಹೆಣ್ಣು ಮಕ್ಕಳಿಗೆ ಪಾಲಕರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಸಲಹೆ ನೀಡಿದರು. ಹೆಣ್ಣು ಮಕ್ಕಳಲ್ಲಿ ನಿಖರವಾದ ಗುರಿಗೆ ಪೋಷಕರು ಪ್ರೋತ್ಸಾಹ ಮಾಡಬೇಕು. ಅವರಿಗೆ ಪ್ರೋತ್ಸಾಹ ನೀಡಿದರೆ ಬಹುದೊಡ್ಡ ಸಾಧನೆ ಮಾಡುತ್ತಾರೆ ಎಂಬುದಕ್ಕೆ ಖೋಖೋ ಆಟಗಾರ್ತಿ ಚೈತ್ರಾ ಮತ್ತು ಭಾರತೀಯ ಯೋಧೆ ಡಿ.ಸಿ.ಮೌಲ್ಯ ಮಾದರಿಯಾಗಿದ್ದಾರೆ. ಹೆಣ್ಣು ಮಕ್ಕಳು ಯಾವುದೇ ಹಿಂಜರಿಕೆ ಮನೋಭಾವ ಇಟ್ಟುಕೊಳ್ಳಬಾರದು. ಅವರ ನಿರ್ಧಾರಕ್ಕೆ ನಾವು ಪ್ರೋತ್ಸಾಹ ಕೊಟ್ಟಾಗ ಸಾಧನೆ ಮಾಡಲು ಸಾಧ್ಯ ಎಂದರು.
ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಇಬ್ಬರು ಇಂದು ನಮ್ಮ ಜೊತೆಯಲ್ಲಿದ್ದಾರೆ. ಒಬ್ಬರು ದೇಶಸೇವೆ ಮತ್ತು ಮತ್ತೊಬ್ಬರು ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇತ್ತೀಚೆಗೆ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಅವರ ಸಾಧನೆ ಎಲ್ಲ ಹೆಣ್ಣು ಮಕ್ಕಳಿಗೂ ಸ್ಫೂರ್ತಿಯಾಗಬೇಕು ಎಂದರು.ಎಸ್‌ಜಿಎಂ ಬೋರ್‌ವೆಲ್ ಮಾಲೀಕ ಲಯನ್ಸ್ ಬಿಎಂ ಪ್ರಭುಸ್ವಾಮಿ, ಪಟೇಲ್ ಬಜಾಜ್‌ನ ಮಾಲೀಕ ವೃಷಭೇಂದ್ರಪ್ಪ ಪಿ. ಮಾತನಾಡಿ, ಸಮಾಜಕ್ಕೆ ಹೆಸರನ್ನು ತಂದ ಈ ಹೆಣ್ಣುಮಕ್ಕಳು ಸಮಾಜಕ್ಕೆ ಮಾದರಿಯಾಗಿದ್ದು ಪೋಷಕರು ಸಹ ಮಕ್ಕಳ ಅಭಿಲಾಷೆಯಂತೆ ಪ್ರೋತ್ಸಾಹ ನೀಡಬೇಕು ಎಂದರು. ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ ಗೌರಿ ಶಂಕರ್, ಸಂಗಮ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಜಿಎಲ್ ಮುದ್ದು ಬಸವಣ್ಣ, ಮೂರು ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳೂ ಉಪಸ್ಥಿತರಿದ್ದರು.