ನುಡಿ ಹಬ್ಬಕ್ಕೆ ಶೃಂಗಾರಗೊಂಡ ಹೂಲಗೇರಿ

KannadaprabhaNewsNetwork | Published : Feb 15, 2025 12:34 AM

ಸಾರಾಂಶ

ಫೆ. 15ರಂದು ನಡೆಯಲಿರುವ ಕುಷ್ಟಗಿ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೂಲಗೇರಿ ಗ್ರಾಮ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಸಮ್ಮೇಳನಕ್ಕೆ ಕೊನೆಯ ಹಂತದ ಸಿದ್ಧತೆಗಳು ಶುಕ್ರವಾರ ನಡೆದಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಏಕನಾಥ ಮೇದಿಕೇರಿಹನುಮಸಾಗರ: ಫೆ. 15ರಂದು ನಡೆಯಲಿರುವ ಕುಷ್ಟಗಿ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ (ನುಡಿ ಹಬ್ಬ)ಕ್ಕೆ ಹೂಲಗೇರಿ ಗ್ರಾಮ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಸಮ್ಮೇಳನಕ್ಕೆ ಕೊನೆಯ ಹಂತದ ಸಿದ್ಧತೆಗಳು ಶುಕ್ರವಾರ ನಡೆದಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ. ಗ್ರಾಮದ ಬೀದಿಗಳನ್ನು ಸ್ವಚ್ಛಗೊಳಿಸಲಾಗಿದೆ.

ಸಮ್ಮೇಳನಕ್ಕೆ ಗ್ರಾಮದ ಎಂ.ಆರ್. ಪಾಟೀಲ್ ಮೈದಾನದಲ್ಲಿ ಸಂಗೀತ ಕಲಾವಿದ ವಾಸಪ್ಪ ಮಾಸ್ತರ್ ಮಹಾ ವೇದಿಕೆ ನಿರ್ಮಿಸಲಾಗಿದೆ. ಹೂಲಗೇರಿಯ ಶೇಖರಪ್ಪ ಬುದ್ಧಿನ್ನಿ ಹೆಸರಿನಲ್ಲಿ ಮಂಟಪ ನಿರ್ಮಿಸಲಾಗಿದೆ.

ಶನಿವಾರ ಬೆಳಗ್ಗೆ 7.30ಕ್ಕೆ ಪರಿಷತ್ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್, ರಾಷ್ಟ್ರ ಧ್ವಜಾರೋಹಣವನ್ನು ಸ್ವಾಗತ ಸಮಿತಿ ಅಧ್ಯಕ್ಷ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್, ಕನ್ನಡ ಧ್ವಜಾರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ನೆರವೇರಿಸಲಿದ್ದಾರೆ.

ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ನಾಡದೇವಿಯ ಭಾವಚಿತ್ರ ಮೆರವಣಿಗೆ ಜರುಗಲಿದ್ದು, ಶ್ರೀ ಗುಂಡಮಲ್ಲೇಶ್ವರ ದೇವಸ್ಥಾನದಿಂದ ಆರಂಭವಾಗಲಿದೆ. ಬೆಳಗ್ಗೆ 10ಕ್ಕೆ ತಾಲೂಕಿನ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ ಕಾರ್ಯಕ್ರಮ ಉದ್ಘಾಟಿಸುವರು. ಸಮ್ಮೇಳನದ ಸರ್ವಾಧ್ಯಕ್ಷ ಹ.ಯ. ಈಟಿಯವರ್, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಸೇರಿ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಆನಂತರ ಸಮ್ಮೇಳಾಧ್ಯಕ್ಷರ ಪರಿಚಯ, ನುಡಿ ಹೊತ್ತಿಗೆ ಬಿಡುಗಡೆ, ಸಮ್ಮೇಳಾನಧ್ಯಕ್ಷರ ನುಡಿ, ಪುಲಿಗಿರಿ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿವಿಧ ಲೇಖಕರ ಗ್ರಂಥಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12.30ಕ್ಕೆ ವಿಚಾರ ಸಂಕಿರಣ, ಮಧ್ಯಾಹ್ನ 3ಕ್ಕೆ ಕವಿಗೋಷ್ಠಿ ನಡೆಯಲಿದೆ. ಸಂಜೆ 5ಕ್ಕೆ ಬಹಿರಂಗ ಅಧಿವೇಶನ, ಸಂಜೆ 7ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಹಿರಿಯ ಜನಪದ ಸಾಹಿತಿ ಸಿದ್ಧಪ್ಪ ಬಿದರಿ ಸಮಾರೋಪ ನುಡಿ ನುಡಿಯಲಿದ್ದಾರೆ.

ಅಡುಗೆ ಸಿದ್ಧತೆ: ಬೆಳಗ್ಗೆ ಉಪಾಹಾರ, ಉಪ್ಪಿಟ್ಟು, ಶಿರಾ ಇರಲಿದೆ. ಮಧ್ಯಾಹ್ನದ ಊಟಕ್ಕೆ ಉದುರು ಸಜ್ಜಕ, ಬದನೆಕಾಯಿ ಪಲ್ಯೆ, ಕಾಳ ಪಲ್ಯೆ, ಮೊಸರು ಚಟ್ನಿ, ರೊಟ್ಟಿ, ಚಪಾತಿ, ಅನ್ನ, ಸಾಂಬಾರು ವ್ಯವಸ್ಥೆ ಮಾಡಲಾಗಿದೆ. ನುರಿತ ಅಡುಗೆ ಭಟ್ಟರು ಅಡುಗೆ ತಯಾರಿಸಲಿದ್ದಾರೆ.

ಮಹಾದ್ವಾರಗಳು: ಎಲ್.ಜಿ. ಕುಂಟನಗೌಡ್ರ ಹೂಲಗೇರಾ, ದುರಗಪ್ಪಾ ಸನ್ನಿ ಹೂಲಗೇರಾ, ಮಹಾಂತಗೌಡ ಪಾಟೀಲ, ಪಿ.ವೈ. ದಂಡಿನ ತಾವರಗೇರಾ, ಶ್ಯಾಮಣ್ಣ ಗೋಟೂರ ಹಿರೇಮನ್ನಾಪುರ, ಚಂದಾಲಿಂಗಪ್ಪ ಬಾಚಲಾಪುರ ಹನುಮಸಾಗರ, ವೆಂಕಟರಾವ್ ಪಂತ ಹನುಮಸಾಗರ, ಬಾಲಪ್ಪ ಭೀಮಪ್ಪ ಸರೂರ ದೋಟಿಹಾಳ ಮಹಾ ದ್ವಾರಗಳು ಸಜ್ಜುಗೊಂಡಿವೆ.

ಸಂಸದರು, ಶಾಸಕರ ಭೇಟಿ: ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಶುಕ್ರವಾರ ಭೇಟಿ ನೀಡಿ ಸಮ್ಮೇಳನದ ಸಿದ್ಧತೆ ಪರಿಶೀಲಿಸಿದರು. ಕಸಾಪ ಸ್ವಾಗತ ಸಮಿತಿ ಗೌರವಾಧ್ಯಕ್ಷ, ಸಂಸದ ಕೆ. ರಾಜಶೇಖರ ಹಿಟ್ನಾಳ ಕೂಡ ಹೂಲಗೇರಾ ಗ್ರಾಮಕ್ಕೆಶುಕ್ರವಾರ ಭೇಟಿ ನೀಡಿ, ಪ್ರಮುಖರೊಂದಿಗೆ ಸಿದ್ಧತೆ ಕುರಿತು ಚರ್ಚಿಸಿದರು.

ಮೆರವಣಿಗೆ: ಸಮ್ಮೇಳನಾಧ್ಯಕ್ಷರು ಹಾಗೂ ಭುವನೇಶ್ವರಿ ದೇವಿ ಮೆರವಣಿಗೆ ವಿಶಿಷ್ಟವಾಗಿ ನಡೆಯಲಿದೆ. ಶರಣಪ್ಪ ಹೊರಪೇಟೆ ನೇತೃತ್ವದಲ್ಲಿ ಗ್ರಾಮೀಣ ಸೊಗಡಿನೊಂದಿಗೆ 13 ಎತ್ತಿನ ಬಂಡಿಗಳನ್ನು ಶೃಂಗಾರ ಮಾಡಲಾಗಿದೆ. ಎತ್ತುಗಳ ಕೊಂಬುಗಳಿಗೆ ಹಳದಿ ಮತ್ತು ಕೆಂಪು ಬಣ್ಣಗಳ ಬಳಿಯಲಾಗಿದೆ. ಬಂಡಿಗಳಿಗೆ ಕನ್ನಡ ಬಾವುಟ ಸೇರಿದಂತೆ ವಿವಿಧ ಪರಿಕರಗಳಿಂದ ಅಲಂಕಾರ ಮಾಡಲಾಗಿದೆ. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಸಮವಸ್ತ್ರದಲ್ಲಿ ಕುಂಭಗಳನ್ನು ಹೊತ್ತು ಸಾಗುವರು. ವಿವಿಧ ಕಲಾ ತಂಡಗಳು, ವಾದ್ಯ ವೈಭವಗಳು ಮೆರುಗು ನೀಡಲಿವೆ. ಪಿಎಸ್‌ಐ ಧನಂಜಯ ಹಿರೇಮಠ ಅವರು ಗುರುವಾರ ಆಗಮಿಸಿ ಸಿದ್ಧತೆ ಪರಿಶೀಲಿಸಿದ್ದಾರೆ.

Share this article