ಧರ್ಮಸಹಿಷ್ಣುತೆ ಹೊಂದಿದ್ದ ಛತ್ರಪತಿ ಶಿವಾಜಿ: ಬಿ.ಸಿ.ಶಿವಾನಂದಮೂರ್ತಿ

KannadaprabhaNewsNetwork | Published : Feb 20, 2025 12:49 AM

ಸಾರಾಂಶ

ಶಿವಾಜಿಯವರ ಯುದ್ಧನೀತಿ ಮಾನವೀಯತೆಯಿಂದ ಕೂಡಿತ್ತು. ಯುದ್ಧದಂತಹ ಸಂದರ್ಭದಲ್ಲಿ ಕೂಡ ಯಾವುದೇ ಆಸ್ತಿ-ಪಾಸ್ತಿಗೆ ಹಾನಿ ಮಾಡದೆ, ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಸದೆ, ಸಂಪತ್ತನ್ನು ಲೂಟಿ ಮಾಡದಂತೆ ಯುದ್ಧ ನಡೆಸುವುದು ಶಿವಾಜಿಯವರ ಉನ್ನತ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಹಿಂದೂ ಧರ್ಮ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಅವರಲ್ಲಿ ಧರ್ಮ ಸಹಿಷ್ಣತಾ ಮನೋಭಾವನೆ ಇತ್ತು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಹಿಂದೂ ಸಾಮ್ರಾಜ್ಯ ಕಟ್ಟುವಲ್ಲಿ ಹಾಗೂ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಶಿವಾಜಿಯವರ ಕೊಡುಗೆ ಅಪಾರವಾದದ್ದು. ಎಲ್ಲ ಜಾತಿ, ಧರ್ಮವನ್ನು ಪ್ರೀತಿಯಿಂದ ಕಾಣುತ್ತಾ, ಎಲ್ಲರ ಅಭಿವೃದ್ಧಿಗೆ ಶ್ರಮಿಸಿದ ಶಿವಾಜಿ ಆಡಳಿತ ಮಾದರಿ ಎಂದು ಬಣ್ಣಿಸಿದರು.

ಶಿವಾಜಿಯವರ ಯುದ್ಧನೀತಿ ಮಾನವೀಯತೆಯಿಂದ ಕೂಡಿತ್ತು. ಯುದ್ಧದಂತಹ ಸಂದರ್ಭದಲ್ಲಿ ಕೂಡ ಯಾವುದೇ ಆಸ್ತಿ-ಪಾಸ್ತಿಗೆ ಹಾನಿ ಮಾಡದೆ, ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಸದೆ, ಸಂಪತ್ತನ್ನು ಲೂಟಿ ಮಾಡದಂತೆ ಯುದ್ಧ ನಡೆಸುವುದು ಶಿವಾಜಿಯವರ ಉನ್ನತ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತು ಎಂದರು.

ದಕ್ಷಿಣ ದೊರೆಗಳ ಮಾದರಿಯಲ್ಲೇ ಶಿವಾಜಿ ಕೂಡ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅವರ ದೃಢ ಸಂಕಲ್ಪ ಮತ್ತು ರಾಜನೀತಿಗಳು ಆದರ್ಶವಾಗಿವೆ ಎಂದ ಅವರು, ಇಂದಿನ ತಲೆಮಾರಿಗೆ ಶಿವಾಜಿಯವರ ಧೈರ್ಯ ಮತ್ತು ಶೌರ್ಯದ ಕುರಿತು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಣಾಧಿಕಾರಿ ಆರ್.ಮಹದೇವಪ್ಪ ಮಾತನಾಡಿ, ಶಿವಾಜಿ ಅವರ ತಾಯಿ ಜೀಜಾಬಾಯಿ ತನ್ನ ಮಗನಿಗೆ ನೀತಿ ಮತ್ತು ಧೈರ್ಯ ತುಂಬುವ ಕಥೆಗಳನ್ನು ಹೇಳುತ್ತಾ ಬೆಳೆಸಿದರು. ಅದರ ಫಲವಾಗಿ ಶಿವಾಜಿ ಉತ್ತಮ ದೊರೆಯಾಗಿ ಮತ್ತು ವೀರ ಯೋಧನಾಗಿ ರೂಪುಗೊಂಡರು. ಇಂದಿನ ಪೋಷಕರು ಸಹ ತಮ್ಮ ಮಕ್ಕಳಿಗೆ ಭಯ ತುಂಬುವ, ಗಾಭರಿ ಹುಟ್ಟಿಸುವ ವಾತಾವರಣವನ್ನು ಸೃಷ್ಟಿಸುವ ಬದಲು ಜೀಜಾಬಾಯಿ ಮಾದರಿಯ ಪಾಲನೆ, ಪೋಷಣೆ ಅಗತ್ಯವಿದೆ ಎಂದರು.

ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ವಿ.ಜೆ.ರೋಹಿಣಿ ಮಾತನಾಡಿ, ಮರಾಠ ಸಾಮ್ರಾಜ್ಯ ಎಂದರೆ ಛತ್ರಪತಿ ಶಿವಾಜಿ, ತನ್ನ ಸಾಮ್ರಾಜ್ಯಕ್ಕೆ ಅವರು ನೀಡಿರುವ ಕೊಡುಗೆ ನಿಜಕ್ಕೂ ಅಪಾರ. ಅವರ ಹೆಸರು ಇಂದಿಗೂ ಇತಿಹಾಸದಲ್ಲಿ ಅಜರಾಮರ ಇಂತಹ ಮಹಾನ್ ವ್ಯಕ್ತಿಗಳ ಸಾಧನೆಯನ್ನು ನೆನಪಿಸಿಕೊಳ್ಳುವುದು ಅಗತ್ಯ ಎಂದರು.

ಡಿ.ದೇವರಾಜ ಅರಸು ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಸರ್ವ ಧರ್ಮಿಯರ ಬೆಂಬಲದೊಡನೆ, ಸರ್ವ ಧರ್ಮಿಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಿಂದೂ ಸಾಮ್ರಾಜ್ಯವನ್ನು ಗಟ್ಟಿಯಾಗಿ ಕಟ್ಟಿದಂತಹ ವೀರ ಶಿವಾಜಿ. ಇಂದು ಅನೇಕ ನಕಲಿ ಹಿಂದೂ ಹುಲಿಗಳು ರಾರಾಜಿಸುತ್ತಿವೆ. ಆದರೆ, ನಿಜವಾದ ಹಿಂದುತ್ವ ಎಲ್ಲರನ್ನೂ ಪ್ರೀತಿಸುವ ಮತ್ತು ಒಳಗೊಳ್ಳುವುದೇ ನಿಜವಾದ ಹಿಂದುತ್ವ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ. ನಂದೀಶ್, ಕ್ಷತ್ರಿಯ ಮರಾಠಿ ಸಮುದಾಯದ ಅಧ್ಯಕ್ಷ ಸುರೇಶ್‌ರಾವ್, ಬಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಶಿವರಾವ್, ಮುಖಂಡರಾದ ಅಂಬುಜಿ ರಾವ್, ನಾಗೇಂದ್ರರಾವ್, ರಾಘವೇಂದ್ರರಾವ್, ನಂದೀಶ್ ಇತರರಿದ್ದರು.

Share this article