ಛಾತ್ರೋಂ ಕಿ ಗೂಂಜ್ ನಗರಸಂಯೋಜಕರಾಗಿ ಮಂಜುನಾಥ್

KannadaprabhaNewsNetwork |  
Published : Jul 03, 2026, 02:00 AM IST
ಎಚ್.ಎಸ್. ಮಂಜುನಾಥ್ ಗೌಡ | Kannada Prabha

ಸಾರಾಂಶ

ವಿದ್ಯಾರ್ಥಿಗಳು ಹಾಗೂ ಯುವಜನರ ಸಮಸ್ಯೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸುವ ಉದ್ದೇಶದಿಂದ ದೇಶದ 28 ಪ್ರಮುಖ ನಗರಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಛಾತ್ರೋಂ ಕಿ ಗೂಂಜ್’ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಬೆಂಗಳೂರು ನಗರ ಸಂಯೋಜಕರಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಅವರನ್ನು ನೇಮಿಸಲಾಗಿದೆ.

-ಕೆಪಿವೈಸಿಸಿ ಯುವ ಘಟಕದ ಅಧ್ಯಕ್ಷರಿಗೆ ಜವಾಬ್ದಾರಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದ್ಯಾರ್ಥಿಗಳು ಹಾಗೂ ಯುವಜನರ ಸಮಸ್ಯೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸುವ ಉದ್ದೇಶದಿಂದ ದೇಶದ 28 ಪ್ರಮುಖ ನಗರಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಛಾತ್ರೋಂ ಕಿ ಗೂಂಜ್’ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಬೆಂಗಳೂರು ನಗರ ಸಂಯೋಜಕರಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಅವರನ್ನು ನೇಮಿಸಲಾಗಿದೆ.ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ, ಇಂಡಿಯನ್ ಯೂತ್ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು, ಪರೀಕ್ಷಾ ಅಕ್ರಮಗಳು, ನಿರುದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 40 ದಿನಗಳ ಕಾಲ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ಅಭಿಯಾನ ನಡೆಯಲಿದೆ. ಇತ್ತೀಚಿನ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳು, ನೇಮಕಾತಿ ವಿಳಂಬ, ನಿರುದ್ಯೋಗ ಹಾಗೂ ಶಿಕ್ಷಣ ವ್ಯವಸ್ಥೆಯ ಸುಧಾರಣೆಯಂತಹ ವಿಷಯಗಳನ್ನು ಜನರ ಮುಂದಿಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಅಭಿಯಾನದ ಭಾಗವಾಗಿ ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಪಕ್ಷಾತೀತ ಹಾಗೂ ರಾಜಕೀಯೇತರ ರೀತಿಯಲ್ಲಿ ಬೃಹತ್ ನೀಟ್ ವಿರೋಧಿ ಜಾಗೃತಿ ಅಭಿಯಾನ ನಡೆಸಲು ಯೋಜನೆ ರೂಪಿಸಲಾಗಿದೆ. ವಾರಾಂತ್ಯಗಳಲ್ಲಿ ಪಂಜಿನ ಮೆರವಣಿಗೆ, ಸಂವಾದ ಕಾರ್ಯಕ್ರಮ, ನೀಟ್ ವಿರೋಧಿ ಸಂಗೀತ ಕಚೇರಿ, ಪ್ರೇರಣಾದಾಯಕ ಭಾಷಣಗಳು, ವಾಕ್‌ಥಾನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಭಿಯಾನದ ಅವಧಿಯಲ್ಲಿ ರಾಹುಲ್ ಗಾಂಧಿ ಅವರು ಕೂಡ ಒಂದು ದಿನ ಬೆಂಗಳೂರಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಬೆಂಗಳೂರು ವ್ಯಾಪ್ತಿಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪ್ರತಿಯೊಂದು ತರಗತಿಗೂ ಸ್ವಯಂಸೇವಕರು ಭೇಟಿ ನೀಡಿ ವಿದ್ಯಾರ್ಥಿಗಳ ನೋಂದಣಿ ನಡೆಸಲಿದ್ದು, ಸುಮಾರು 1.5 ಲಕ್ಷ ವಿದ್ಯಾರ್ಥಿಗಳನ್ನು ಅಭಿಯಾನಕ್ಕೆ ನೋಂದಾಯಿಸುವ ಗುರಿ ಹೊಂದಲಾಗಿದೆ. ನಗರ ಸಂಯೋಜಕರಾಗಿ ಎಚ್.ಎಸ್. ಮಂಜುನಾಥ್ ಗೌಡ ಅವರು ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಯುವಜನರನ್ನು ಅಭಿಯಾನದೊಂದಿಗೆ ಸಂಪರ್ಕಿಸುವುದು, ಜಾಗೃತಿ ಕಾರ್ಯಕ್ರಮಗಳು, ಸಂವಾದಗಳು ಮತ್ತು ಸಂಘಟನಾ ಚಟುವಟಿಕೆಗಳನ್ನು ಮುನ್ನಡೆಸುವ ಜವಾಬ್ದಾರಿ ವಹಿಸಲಿದ್ದಾರೆ.ಅಭಿಯಾನದ ಮೂಲಕ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವಿರುದ್ಧ ಸಮಗ್ರ ತನಿಖೆ ಹಾಗೂ ಸುಧಾರಣೆ, ಪರೀಕ್ಷೆಗಳು, ಫಲಿತಾಂಶಗಳು ಮತ್ತು ನೇಮಕಾತಿ ಪ್ರಕ್ರಿಯೆಗಳಿಗೆ ವಾರ್ಷಿಕ ಶೈಕ್ಷಣಿಕ ಕ್ಯಾಲೆಂಡರ್ ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪ್ರಮುಖ ಹಕ್ಕೊತ್ತಾಯಗಳನ್ನು ಮುಂದಿರಿಸಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಜನಪರ ಯೋಜನೆ ಜನರಿಗೆ ತಲುಪಿಸಿ
ಭವಿಷ್ಯದ ಪೀಳಿಗೆ ಆರೋಗ್ಯ ಕಾಪಾಡಲು ಪೋಲಿಯೋ ಲಸಿಕೆ ಹಾಕಿಸಿ: ಶಾಸಕ ಸಿ.ಎನ್.ಬಾಲಕೃಷ್ಣ ಕರೆ