ಕನ್ನಡಪ್ರಭ ವಾರ್ತೆ ಬೆಂಗಳೂರು
ಬುಧವಾರ ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಎಂ. ಚಿದಾನಂದಮೂರ್ತಿ ಅವರ ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ವಿವಿಧ ಮರು ಮುದ್ರಣ ಕೃತಿಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಚಿದಾನಂದಮೂರ್ತಿ ಅವರಿಗೆ ಗುರುಪರಂಪರೆಯಲ್ಲಿ ಇರುವಂತೆ ಪ್ರಾಮಾಣಿಕತೆ, ನಿಷ್ಠೆ ಇದೆ. ಅವರ ಅಧ್ಯಯನದ ಹರವು, ಹಾಸು, ಮಹತ್ವ ಬಹಳ ದೊಡ್ಡದು. ಅವರ ಸಾಹಿತ್ಯದ ವಿಸ್ತಾರ ಮತ್ತು ಶಾಸ್ತ್ರೀಯ ಅಧ್ಯಯನ ಮಾಡುವ ಅವಶ್ಯಕತೆ ಹಿಂದೆಂದಿಗಿಂತ ಅಧಿಕವಾಗಿದೆ. ಕನ್ನಡ ಪರಿಚಾರಿಕೆಗೆ ಚಿದಾನಂದಮೂರ್ತಿ ಅವರ ಕೊಡುಗೆ ಬಹಳ ದೊಡ್ಡದು. ಕನ್ನಡ ಸಾಹಿತ್ಯ, ಸಂಶೋಧನೆ ಮತ್ತು ವೈಚಾರಿಕತೆಗೆ ಚಿದಾನಂದಮೂರ್ತಿ ಅವರು ಕೊಡುಗೆ ಅನನ್ಯವಾದದ್ದು. ಅವರ ಸೃಜನಶೀಲ, ಸೃಜನೇತರ ಬರಹಗಳ ಜೊತೆಜೊತೆಗೆ ಅವರ ಸಂಶೋಧನಾಶೀಲ ವಿಚಾರ ವೈಖರಿಯು ಅಚ್ಚರಿಗೊಳಿಸುತ್ತದೆ ಎಂದು ಹೇಳಿದರು.ಕೃತಿಯ ಸಂಪಾದಕರ ಡಾ. ಬಸವರಾಜ ಕಲ್ಗುಡಿ ಮಾತನಾಡಿ ಡಾ.ಎಂ. ಚಿದಾನಂದಮೂರ್ತಿ ಬರೆದ ಸಾಹಿತ್ಯದ ಪ್ರಮಾಣ ಬಹಳ ದೊಡ್ಡದು. ಈಗ 15 ಸಂಪುಟಗಳಲ್ಲಿ ಅವರ ಕೃತಿಗಳನ್ನು ವಿಂಗಡಿಸಿದ್ದೇವೆ. ಆದರೆ ಅಪ್ರಕಟಿತ ಬಹುದೊಡ್ಡ ಸಾಹಿತ್ಯ ಭಂಡಾರವೇ ಅವರ ಬಳಿ ಇದೆ. ಪುಸ್ತಕ ಪ್ರಾಧಿಕಾರ ಈ ಸಮಗ್ರ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಚಿಮೂ ಅವರನ್ನು ಗೌರವಿಸುವ ಪ್ರಶಂಸನೀಯ ಕೆಲಸ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ, ದೇವಾಲಯಗಳ ಹುಂಡಿಗಳಿಗೆ ಹಣ ಹಾಕುವ ಜನ ಪುಸ್ತಕ ಕೊಳ್ಳಲು ಹಿಂದು ಮುಂದು ನೋಡುವ ಭಾವನೆ ಬದಲಾಗಬೇಕು. ಮನೆಗೊಂದು ಪೂಜಾ ಕೊಠಡಿ ಇರುವಂತೆ ಮನೆಗೊಂದು ಗ್ರಂಥಾಲಯ ಇರಬೇಕು ಎಂದು ಹೇಳಿದರು.ಡಾ. ಸಿ.ಆರ್. ಚಂದ್ರಶೇಖರ, ವಿನಯ್ ಚಿದಾನಂದಮೂರ್ತಿ, ನಿವೇದಿತ ಹೊನ್ನತ್ತಿ, ಟಿ.ಎಸ್. ಶ್ರೀಕಂಠಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಇದ್ದರು.