ಯೋಗವು ಆರೋಗ್ಯದ ದಾರಿ, ಆರೋಗ್ಯವು ಯಶಸ್ಸಿನ ದಾರಿ

KannadaprabhaNewsNetwork |  
Published : Jun 22, 2026, 01:15 AM IST
49 | Kannada Prabha

ಸಾರಾಂಶ

ಯೋಗಾಭ್ಯಾಸವು ಇಂದು ವಿಶ್ವದಾದ್ಯಂತ ಆರೋಗ್ಯ, ಶಾಂತಿ ಮತ್ತು ಮಾನವೀಯ ಮೌಲ್ಯಗಳ ಸಂಕೇತ

ಕನ್ನಡಪ್ರಭ ವಾರ್ತೆ ಮೈಸೂರು

ಯೋಗವು ಆರೋಗ್ಯದ ದಾರಿ, ಆರೋಗ್ಯವು ಯಶಸ್ಸಿನ ದಾರಿ ಎಂದು ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ತಿಳಿಸಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗ ಸಂಕಲ್ಪವಿಧಿಯನ್ನು ಬೋಧಿಸಿ ಮಾತನಾಡಿದ ಅವರು, ಯೋಗಾಭ್ಯಾಸವು ಇಂದು ವಿಶ್ವದಾದ್ಯಂತ ಆರೋಗ್ಯ, ಶಾಂತಿ ಮತ್ತು ಮಾನವೀಯ ಮೌಲ್ಯಗಳ ಸಂಕೇತವಾಗಿ ಬೆಳೆಯುತ್ತಿದೆ. ಸದೃಢ ದೇಹ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜೀವನದ ಪ್ರತಿ ಹಂತದಲ್ಲಿಯೂ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಕಾಪಾಡುವಲ್ಲಿ ಯೋಗವು ಶಕ್ತಿಯುತ ಸಾಧನ. ಯೋಗ ಭಾರತದ ಅತ್ಯಂತ ಪ್ರಾಚೀನ ಆಧ್ಯಾತ್ಮಿಕ ಮತ್ತು ದೈಹಿಕ ಸಾಧನೆಗಳಲ್ಲೊಂದಾಗಿದೆ. ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಏಕತ್ವದ ಭಾವದಲ್ಲಿ ತನ್ಮಯಗೊಳಿಸಿ ಉಲ್ಲಾಸಭರಿತ ಹಾಗೂ ಶಾಂತಿ ಸಂಯಮದ ಜೀವನಕ್ಕೆ ಕೊಂಡಿ ಎಂದು ಅವರು ಹೇಳಿದರು.

ನಮ್ಮ ಋಷಿ ಮುನಿಗಳು ಯೋಗವನ್ನು ಪರಿಚಯಿಸಿ ಅದರ ಮಹತ್ವವನ್ನು ಸಾರಿದರು. ಇದಕ್ಕೆ 5 ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ ಎಂದು ನಂಬಲಾಗಿದೆ. ಸಿಂಧೂ ಬಯಲಿನ ನಾಗರಿಕತೆಯ ಅವಶೇಷಗಳಲ್ಲಿ ಧ್ಯಾನಮುದ್ರೆಯಲ್ಲಿ ಕುಳಿತಿರುವ ವ್ಯಕ್ತಿಗಳ ಚಿತ್ರ ದೊರೆತಿರುವುದು ಇದಕ್ಕೆ ನಿದರ್ಶನ. ಋಗ್ವೇದದಲ್ಲಿ ಯೋಗ ಮತ್ತು ಧ್ಯಾನದ ಕುರಿತ ಉಲ್ಲೇಖಗಳಿವೆ. ಉಪನಿಷತ್ತುಗಳಲ್ಲಿ ಯೋಗವನ್ನು ಆತ್ಮಜ್ಞಾನ ಮತ್ತು ಮೋಕ್ಷದ ಮಾರ್ಗವಾಗಿ ವಿವರಿಸಲಾಗಿದೆ. ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ದೇಶಗಳಲ್ಲಿ ಯೋಗ ಮತ್ತು ಭಾರತೀಯ ತತ್ವಶಾಸ್ತ್ರವನ್ನು ಪರಿಚಯಿಸಿದರು ಎಂದು ಅವರು ತಿಳಿಸಿದರು.

ಯೋಗದ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದೆ. ಇಂದಿನ ಆಧುನಿಕತೆಯ ವೇಗದ ಬದುಕಿನಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಅನೇಕರು ಸ್ಪರ್ಧಾತ್ಮಕ ವಾತಾವರಣ, ಒತ್ತಡದ ಬದುಕು, ತಂತ್ರಜ್ಞಾನದ ಅತಿಯಾದ ಬಳಕೆಗಳಿಂದ ಮಾನಸಿಕ ಆರೋಗ್ಯದ ಏರುಪೇರಿನಿಂದ ಬಳಲುತ್ತಿದ್ದಾರೆ. ಯೋಗಾಭ್ಯಾಸವು ಇದಕ್ಕೆ ಸೂಕ್ತವಾದ ಮಾರ್ಗ. ಇದು ಜೀವನದಲ್ಲಿ ಮಹತ್ತರ ಬದಲಾವಣೆ ತರಬಲ್ಲದು. ಉತ್ತಮ ಆರೋಗ್ಯ, ಉತ್ತಮ ಚಿಂತನೆ ಮತ್ತು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಯೋಗವು ಪರಿಣಾಮಕಾರಿ ಮಾರ್ಗ. ಇದು ದೈನಂದಿನ ಜೀವನದ ಭಾಗವಾಗಬೇಕು. ಆಚರಣೆಗಷ್ಟೇ ಸೀಮಿತವಾಗಬಾರದು ಎಂದರು.

ಪತಂಜಲಿ ಯೋಗ ಶಿಕ್ಷಣ ಹಾಗೂ ಸಂಶೋಧನ ಸಂಸ್ಥೆಯ ಸದಸ್ಯ ರಮೇಶ್ ಮತ್ತು ತಂಡದವರು ಯೋಗಾಭ್ಯಾಸ ಮಾರ್ಗದರ್ಶನ ಮಾಡಿದರು. ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭು ಸ್ವಾಗತಿಸಿದರು. ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಪಿ. ಮಹಾದೇವಸ್ವಾಮಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣ ಕೇವಲ ಸರ್ಕಾರಿ ನೌಕರಿಗಾಗಿ ಅಲ್ಲ: ಶಾಸಕ ಎಚ್.ಡಿ.ತಮ್ಮಯ್ಯ
ಆರೋಗ್ಯವಂತರಾಗಿ ಬದುಕಲು ಯೋಗಾಭ್ಯಾಸ ಅಗತ್ಯ