ಮುಖ್ಯಮಂತ್ರಿ, ಗೃಹಸಚಿವರ ಹೇಳಿಕೆ ಖಂಡನೀಯ: ಹಿರೇಮಠ

KannadaprabhaNewsNetwork |  
Published : Apr 20, 2024, 01:09 AM IST
4564 | Kannada Prabha

ಸಾರಾಂಶ

ನಾನು ಕಾಂಗ್ರೆಸ್‌ ಪಕ್ಷದಿಂದಲೇ ಚುನಾಯಿತನಾಗಿರುವ ಪಾಲಿಕೆ ಸದಸ್ಯ. ಇಂತಹ ಘಟನೆ ನಡೆದ ವೇಳೆ ರಾಜ್ಯ ಸರ್ಕಾರ ನಮ್ಮ ಪರವಾಗಿ ನಿಲ್ಲದೇ ಈ ರೀತಿಯ ಹೇಳಿಕೆ ನೀಡುತ್ತಿರುವುದು ನನಗೆ ನೋವುಂಟು ಮಾಡಿದೆ.

ಹುಬ್ಬಳ್ಳಿ:

ನಮ್ಮ ಕುಟುಂಬ ಈಗಾಗಲೇ ಮಗಳನ್ನು ಕಳೆದುಕೊಂಡು ದುಖಃದಲ್ಲಿದೆ. ಮುಖ್ಯಮಂತ್ರಿ, ಗೃಹ ಸಚಿವರು ವೈಯಕ್ತಿಕ ಕಾರಣಕ್ಕೆ ಹತ್ಯೆ ನಡೆದಿರುವುದು ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ನಾವೇನು ಮುಸ್ಲಿಂರ ಸಂಬಂಧಿಕರಾ? ವೈಯಕ್ತಿಕ ಎಂದರೆ ಏನು ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಲಿ ಎಂದು ಕೊಲೆಯಾದ ನೇಹಾ ತಂದೆಯೂ ಆಗಿರುವ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ನಿರಂಜನಯ್ಯ ಹಿರೇಮಠ ಒತ್ತಾಯಿಸಿದರು.

ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ಈಗಾಗಲೇ ಈ ಘಟನೆಯಿಂದಾಗಿ ಭಯದಲ್ಲಿಯೇ ಕಾಲಕಳೆಯುತ್ತಿದೆ. ನಾನು ಕಾಂಗ್ರೆಸ್‌ ಪಕ್ಷದಿಂದಲೇ ಚುನಾಯಿತನಾಗಿರುವ ಪಾಲಿಕೆ ಸದಸ್ಯ. ಇಂತಹ ಘಟನೆ ನಡೆದ ವೇಳೆ ರಾಜ್ಯ ಸರ್ಕಾರ ನಮ್ಮ ಪರವಾಗಿ ನಿಲ್ಲದೇ ಈ ರೀತಿಯ ಹೇಳಿಕೆ ನೀಡುತ್ತಿರುವುದು ನನಗೆ ನೋವುಂಟು ಮಾಡಿದೆ. ಇದನ್ನೆಲ್ಲ ನಮ್ಮ ಸಮಾಜ ಬಾಂಧವರು ನೋಡುತ್ತಿದ್ದಾರೆ. ಈಗಾಗಲೇ ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಕರೆ ಮಾಡಿ ಧೈರ್ಯ ತುಂಬಿ, ಯಾವುದೇ ರೀತಿಯಲ್ಲೂ ಭಯಬೇಡಿ. ನಿಮ್ಮೊಂದಿಗೆ ಸಮಾಜ ನಿಲ್ಲಲಿದೆ. ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳದೇ ಆಗಿರುವ ಘಟನೆ ಕುರಿತು ನೇರವಾಗಿ ಉತ್ತರ ನೀಡುವಂತೆ ತಿಳಿಸಿದ್ದಾರೆ ಎಂದರು.

ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ:

ನನ್ನ ಮಗಳು ಲವ್‌ ಜಿಹಾದ್‌ಗೆ ಬಲಿಯಾಗಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮಗಳದೇ ತಪ್ಪು ಇರುವಂತೆ ಬಿಂಬಿಸಿ ಸುಳ್ಳು ವಿಡಿಯೋ ಹರಿಬಿಟ್ಟು ಅವಳ ತೇಜೋವಧೆ ಮಾಡುವ ಯತ್ನ ಮಾಡಲಾಗುತ್ತಿದೆ. ಇದೆಲ್ಲ ಸಂಪೂರ್ಣ ಸುಳ್ಳು. ಇದನ್ನು ತಕ್ಷಣ ನಿಲ್ಲಿಸಲಿ. ಆರೋಪಿಯನ್ನು ಗುಂಡಿಟ್ಟು ಕೊಲ್ಲಬೇಕು, ಇಲ್ಲವೇ ಗಲ್ಲುಶಿಕ್ಷೆಗೆ ಒಳಪಡಿಸಬೇಕು. ಅಂದಾಗ ಮಾತ್ರ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ಬಿಜೆಪಿಯ ಅನೇಕ ನಾಯಕರು ನನ್ನ ಮನೆಗೆ ಭೇಟಿ ನೀಡಿ ನನ್ನ ಕುಟುಂಬದವರನ್ನೇ ಭೇಟಿಯಾಗಿ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯ ಕಳೆದುಕೊಳ್ಳಬೇಡಿ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ