ಮುಂಗಾರು ಮಳೆಗೆ ತುಂಬಿದ ಕಾವೇರಿ ನದಿ, ಕಬಿನಿಗೆ ಜಲಾಶಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಣೆ

KannadaprabhaNewsNetwork | Updated : Jul 30 2024, 05:54 AM IST

ಸಾರಾಂಶ

ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಪುಟ ಸಹೋದ್ಯೋಗಿಗಳ ಜೊತೆ ಬಾಗಿನ ಅರ್ಪಿಸಿದರು.

 ಮಂಡ್ಯ/ಮೈಸೂರು :  ಈ ಬಾರಿಯ ಮುಂಗಾರು ಮಳೆಗೆ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳು ಜುಲೈ ತಿಂಗಳಲ್ಲಿಯೇ ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ಸಂಪುಟ ಸಹೋದ್ಯೋಗಿಗಳ ಜೊತೆ ಕಾವೇರಿ ಹಾಗೂ ಕಪಿಲಾ ನದಿಗಳಿಗೆ ಬಾಗಿನ ಅರ್ಪಿಸಿದರು. ಸಾಧಾರಣವಾಗಿ ಆಷಾಢ ಮಾಸದಲ್ಲೇ ಜಲಾಶಯ ಭರ್ತಿಯಾದರೂ ಅಮಾವಾಸ್ಯೆ ಕಳೆದು ಶ್ರಾವಣ ಮಾಸ ಆರಂಭದ ಬಳಿಕವೇ ಬಾಗಿನ ಸಲ್ಲಿಸುವುದು ವಾಡಿಕೆ. ಆದರೆ, ಸಿದ್ದರಾಮಯ್ಯನವರು ಈ ಬಾರಿ ಆಷಾಢದಲ್ಲೇ ಬಾಗಿನ ಅರ್ಪಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಬೆಳಗ್ಗೆ 11 ಗಂಟೆಯ ಸುಮಾರಿಗೆ ಸಂಪುಟ ಸಹೋದ್ಯೋಗಿಗಳ ಜೊತೆ ಕೆಆರ್‌ಎಸ್‌ಗೆ ಆಗಮಿಸಿದ ಸಿಎಂ, ಅಲ್ಲಿಂದ ವಿಶೇಷ ಬಸ್‌ನಲ್ಲಿ ಡ್ಯಾಂವರೆಗೆ ಆಗಮಿಸಿದರು. ಈ ವೇಳೆ, ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ, ಕಾವೇರಿ ನದಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ, ಅಭಿಜಿನ್‌ ಮುಹೂರ್ತದಲ್ಲಿ ನದಿಗೆ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿ, ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಕ್ಕೆ ನಾನು ಮೂರನೇ ಬಾರಿಗೆ ಬಾಗಿನ ಅರ್ಪಿಸಲು ಬಂದಿದ್ದೇನೆ. ವ್ಯವಸಾಯಕ್ಕೆ, ರಾಜ್ಯದ ಜನತೆಗೆ ಕುಡಿಯುವ ನೀರಿಗೆ ಈ ಬಾರಿ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ. ತಮಿಳುನಾಡಿಗೆ ಜೂನ್ ಮತ್ತು ಜುಲೈಯಲ್ಲಿ 40 ಟಿಎಂಸಿ ನೀರನ್ನು ನೀಡಬೇಕಾಗಿದ್ದು, ಈಗಾಗಲೇ ಅಷ್ಟೂ ನೀರನ್ನು ಹರಿಸಲಾಗಿದೆ. ಮೇಕೆದಾಟು ನಮ್ಮ ಹಕ್ಕು. ಆ ಯೋಜನೆ ಅನುಷ್ಠಾನಗೊಂಡರೆ 65 ಟಿಎಂಸಿ ನೀರನ್ನು ಸಂಗ್ರಹಿಸಿಡಬಹುದು ಎಂದರು.

ಬಳಿಕ, ಮೈಸೂರು ತಾಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯಕ್ಕೆ ಆಗಮಿಸಿದ ಸಿಎಂ, ಸಂಜೆ 5.30ರ ಧನುರ್‌ ಲಗ್ನದಲ್ಲಿ ಕಬಿನಿಗೆ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಸಿಎಂ, ಕಬಿನಿ ಜಲಾಶಯದ ಕೆಳಭಾಗದಲ್ಲಿ ಕೆಆರ್‌ಎಸ್ ಮಾದರಿಯಲ್ಲಿ ಉದ್ಯಾನವನ ನಿರ್ಮಿಸುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೆಆರ್‌ಎಸ್‌ ಬಳಿಯ ಕಾವೇರಿ ಪ್ರತಿಮೆ ಇರುವ ಸ್ಥಳವನ್ನು ನವವಧುವಿನಂತೆ ಸಿಂಗರಿಸಲಾಗಿತ್ತು. ಅಣೆಕಟ್ಟೆಯುದ್ದಕ್ಕೂ ಕನ್ನಡದ ಬಾವುಟಗಳನ್ನು ಕಟ್ಟಲಾಗಿತ್ತು. ಹಳದಿ ಮತ್ತು ಕೆಂಪು ವರ್ಣದ ಹೂವುಗಳಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಚಿತ್ರವನ್ನು ವಿನ್ಯಾಸಗೊಳಿಸಲಾಗಿತ್ತು. ಕಬಿನಿ ಜಲಾಶಯವನ್ನು ಕೂಡ ಮಧುವಣಗಿತ್ತಿಯಂತೆ ಶೃಂಗರಿಸಲಾಗಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಈ ಭಾಗದ ಸಂಸದರು, ಶಾಸಕರು, ಅಧಿಕಾರಿಗಳು ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಾವೇರಿ ಮಾತೆಗೆ ಡಿಕೆಶಿಯಿಂದ ಮಾತ್ರ ಪೂಜೆ:

ಸಾಮಾನ್ಯವಾಗಿ ಅಣೆಕಟ್ಟೆಯ ಮೇಲ್ಭಾಗದಲ್ಲಿರುವ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿ ಬಳಿಕ ಕೆಳಭಾಗದಲ್ಲಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯನವರು, ಕೆಳಭಾಗದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸದೆ ವೇದಿಕೆ ಏರಿದರು. ಆದರೆ, ಡಿ.ಕೆ.ಶಿವಕುಮಾರ್ ಮಾತ್ರ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿ, ಮೆಟ್ಟಿಲುಗಳ ಮೂಲಕ ಕೆಳಗಿಳಿದು ಬಂದು ಕಾವೇರಿ ಪ್ರತಿಮೆಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ಸಂಪ್ರದಾಯಕ್ಕೆ ವಿರುದ್ಧವಾಗಿ ಬಾಡೂಟ ಆಯೋಜನೆ:

ಕಾವೇರಿ ಬಾಗಿನ ಸಲ್ಲಿಕೆ ಕಾರ್ಯಕ್ರಮದ ದಿನ ಸಸ್ಯಾಹಾರಿ ಭೋಜನ ಏರ್ಪಡಿಸುವುದು ಸಂಪ್ರದಾಯವಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಬಾಗಿನ ಸಲ್ಲಿಸಿದ ದಿನ ಬಾಡೂಟ ಆಯೋಜನೆ ಮಾಡಿ ನಿಗಮದ ಅಧಿಕಾರಿಗಳು ಸಂಪ್ರದಾಯ ಮುರಿದ ಆರೋಪಕ್ಕೆ ಗುರಿಯಾದರು. ಸಚಿವರು ಹೊರಟ ಬಳಿಕ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳ ಬೆಂಬಲಿಗರಿಗೆ ಖಾಸಗಿ ಹೋಟೆಲ್‌ನಲ್ಲಿ ಭರ್ಜರಿ ಬಾಡೂಟವನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಆಯೋಜಿಸಿದ್ದರು.

Share this article