ಕನ್ನಡಪ್ರಭ ವಾರ್ತೆ ಬಾಗಲಕೋಟೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸರ್ಕಾರಿ ನೌಕರರೊಂದಿಗೆ ನಡೆದ ಸಂವಾದ ಸಭೆಯಲ್ಲಿ ಜಿಲ್ಲೆಯ ಮುಧೋಳ ತಾಲೂಕಿನ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸಿ, ತಾಲೂಕಿನಲ್ಲಿ ಪ್ರಸ್ತುತ ಎದುರಾಗುತ್ತಿರುವ ಬರ ಪರಿಸ್ಥಿತಿ, ಕುಡಿಯುವ ನೀರಿನ ಲಭ್ಯತೆ ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಕುರಿತು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸರ್ಕಾರಿ ನೌಕರರೊಂದಿಗೆ ನಡೆದ ಸಂವಾದ ಸಭೆಯಲ್ಲಿ ಜಿಲ್ಲೆಯ ಮುಧೋಳ ತಾಲೂಕಿನ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸಿ, ತಾಲೂಕಿನಲ್ಲಿ ಪ್ರಸ್ತುತ ಎದುರಾಗುತ್ತಿರುವ ಬರ ಪರಿಸ್ಥಿತಿ, ಕುಡಿಯುವ ನೀರಿನ ಲಭ್ಯತೆ ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಕುರಿತು ಮಾಹಿತಿ ನೀಡಿದರು.ಮುಧೋಳ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿ, ಕುಡಿಯುವ ನೀರಿನ ಲಭ್ಯತೆ ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ಮೇವು ಪೂರೈಕೆ ಕುರಿತು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು ಸಭೆಗೆ ತಿಳಿಸಿದರು. ಈ ವೇಳೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಾಶಯದಿಮದ ನೀರು ಬಿಡುಗಡೆ ಮಾಡಲಾಗುತ್ತಿದ್ದರೂ, ಅದು ಕೊನೆಯ ಹಂತದವರೆಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ವಿಷಯವನ್ನು ಸಭೆಗೆಯಲ್ಲಿ ಪ್ರಸ್ತಾಪಿಸಲಾಯಿತು. ಜಮೀನುಗಳಿಗೆ ಪಂಪ್ಸೆಟ್ಗಳ ಮೂಲಕ ನೀರು ಎತ್ತಿಕೊಳ್ಳುವುದನ್ನು ನಿಯಂತ್ರಿಸಿ, ನೀರು ಸರಾಗವಾಗಿ ಕೊನೆಯ ಹಂತದವರೆಗೆ ನೀರು ತಲುಪುವಂತೆ ಕ್ರಮಕೈಗೊಳ್ಳುವ ಕುರಿತು ಚರ್ಚಿಸಲಾಯಿತು. ಪಂಪಸೆಟ್ ಬಂದ್ ಮಾಡಿಸುವುದು ಸೇರಿದಂತೆ ಅಗತ್ಯ ಪೊಲೀಸ್ ಭದ್ರತೆ ಒದಗಿಸಿ ನೀರು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮುಖ್ಯಮಂತ್ರಿಗಳು ಮಾಹಿತಿ ಪಡೆದರು. ಈ ವೇಳೆ ಬಾಗಲಕೋಟೆ ನೂತ ಸಚಿವ ವಿಜಯಾನಂದ ಕಾಶಪ್ಪನವರ ಅವರು ಮಾತನಾಡಿ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಹಿಡಕಲ್ ಜಲಾಶಯದಿಂದ ನೀರು ಬಿಟ್ಟರೂ ಅದು ಕೊನೆಯ ಭಾಗದವರೆಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಅಧಿಕಾರಿಗಳು ಇನ್ನು ಮುಂದೆಯಾದರೂ ನೀರು ಬಿಟ್ಟಾಗ ಮಧ್ಯದಲ್ಲಿ ನೀರು ಪೋಲಾಗದಂತೆ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಕೊನೆಯವರೆಗೂ ತಲುಪಿಸುವವರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ತಿಳಿಸಿದರು.ಈ ಸಂವಾದ ಸಭೆಯು ಬಾಗಲಕೋಟೆಯ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆದಿದ್ದು, ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜಿ.ಪಂ ನೂತನ ಸಭಾಭವನದಲ್ಲಿ ನಿಯೋಜನೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನೀಲ್ ಅಹೀರೆ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಅದೇ ರೀತಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿಯೂ ಸಹ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲಾಡಳಿತದಿಂದ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.