ಕನ್ನಡಪ್ರಭ ವಾರ್ತೆ ಮಂಗಳೂರು
ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಮೂಲಕ ಜನತೆಗೆ ಸಂಕಷ್ಟ ತಂದಿತ್ತಿದೆ. ಸರ್ಕಾರ ಭ್ರಷ್ಟಾಚಾರದಿಂದ ಮುಳುಗಿದ್ದು, ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಆಗ್ರಹಿಸಿದ್ದಾರೆ.ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ನಗರದ ಮಿನಿ ವಿಧಾನಸೌಧ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್‌ನ ಭರವಸೆ ನಂಬಿ ಜನ ಬೆಂಬಲಿಸಿದ್ದರು. ಆದರೆ ಈಗ ಕಾಂಗ್ರೆಸ್‌ನ ನೈಜ ಮುಖ ಅನಾವರಣವಾಗಿದೆ. ದಿನೇ ದಿನೇ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹಾಲಿನ ದರವೂ ಏರಿಕೆಯಾಗಿದೆ. ಜನತೆ ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೇಳುವ ಹಂತಕ್ಕೆ ಬಂದಿದ್ದಾರೆ. ಇದು ಲೂಟಿಕೋರ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗುತ್ತಿಗೆದಾರರು, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ. ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ನಳಿನ್ ಕುಮಾರ್ ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ವಾಲ್ಮೀಕಿ ನಿಗಮ ಮೂಲಕ ಸವಲತ್ತುಗಳಿಗೆ ನೀಡಬೇಕಾದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಕಾರಣ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ದೂರಿದರು.ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 14 ತಿಂಗಳಲ್ಲಿ ಏನು ಸಾಧನೆ ಮಾಡಿದೆ ಎಂಬುದನ್ನು ಜನತೆಯ ಮುಂದಿಡಬೇಕು. ಆಗ ನಿಜ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ಶಾಸಕಿ ಭಾಗಿರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿದರು.ಮುತ್ತಿಗೆ ಯತ್ನ:ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆಯಿತು. ಆದರೆ ಪೊಲೀಸರು ಇದಕ್ಕೆ ಅವಕಾಶ ಕೊಡಲಿಲ್ಲ. ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದರು. ಪ್ರತಿಭಟನೆ ವೇಳೆ ಬಿಜೆಪಿ ಮಹಿಳಾ ಕಾರ್ಯಕತೆಯರು ಮತ್ತು ಮಹಿಳಾ ಪೊಲೀಸರ ನಡುವೆ ತಳ್ಳಾಟ ನಡೆಯಿತು. ಈ ವೇಳೆ ಮಹಿಳಾ ಪೊಲೀಸರು ಬಿಜೆಪಿ ಕಾರ್ಯರ್ತೆಯೊಬ್ಬರ ಸೀರೆ ಎಳೆದರು ಎಂದು ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಉಪಮೇಯರ್ ಸುನೀತಾ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಪ್ರೇಮಾನಂದ ಶೆಟ್ಟಿ, ಸಂತೋಷ್ ಕುಮಾರ್ ಬೊಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಕಿಶೋರ್ ಕುಮಾರ್, ಸುಲೋಚನಾ ಜಿ.ಕೆ. ಭಟ್, ಪೂರ್ಣಿಮಾ, ವಿನಯ ನೇತ್ರ, ಹರೀಶ್ ಬಿಜತ್ರೆ, ಜಗನ್ನಾಥ್, ದಿನೇಶ್ ಅಮ್ಟೂರು ಇದ್ದರು.