ವಿದ್ಯೆ, ಊಟ, ಬಟ್ಟೆ ಕೊರತೆ ಹಣೆಬರಹವಲ್ಲ: ಸಿಎಂ ಸಿದ್ದರಾಮಯ್ಯ

KannadaprabhaNewsNetwork | Published : Sep 6, 2024 1:04 AM

ಸಾರಾಂಶ

ಯಾವುದೇ ವ್ಯಕ್ತಿಯು ವಿದ್ಯೆ, ಊಟ, ಬಟ್ಟೆ ಮುಂತಾದ ಅಗತ್ಯ ಸೌಕರ್ಯಗಳನ್ನು ಹೊಂದಿಲ್ಲದಿದ್ದರೆ ಅದು ಅವರ ಹಣೆಬರಹ ಅಲ್ಲ. ವ್ಯವಸ್ಥೆಯ ವೈಫಲ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯಾವುದೇ ವ್ಯಕ್ತಿಯು ವಿದ್ಯೆ, ಊಟ, ಬಟ್ಟೆ ಮುಂತಾದ ಅಗತ್ಯ ಸೌಕರ್ಯಗಳನ್ನು ಹೊಂದಿಲ್ಲದಿದ್ದರೆ ಅದು ಅವರ ಹಣೆಬರಹ ಅಲ್ಲ. ವ್ಯವಸ್ಥೆಯ ವೈಫಲ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ 30 ಶಿಕ್ಷಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಾವು ಯಾರಿಗಾದರೂ ‘ನಿನಗೇಕೆ ವಿದ್ಯೆ ಇಲ್ಲ? ಉಟವಿಲ್ಲ? ಬಟ್ಟೆ ಇಲ್ಲ?’ ಎಂದು ಕೇಳಿದರೆ, ‘ನಮ್ಮ ಹಣೆ ಬರಹ ಸ್ವಾಮಿ. ಏನ್ ಮಾಡೋದು?’ ಎನ್ನುತ್ತಾರೆ. ‘ಹಾಗಾದರೆ ಇದು ಶಿಕ್ಷಣವೇ? ಇದು ಕರ್ಮ ಸಿದ್ಧಾಂತ ಅಲ್ಲವೇ?’ ಎಂದು ಪ್ರಶ್ನಿಸಿದರು.

850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಕಂದಾಚಾರ, ಗೊಡ್ಡು ಸಂಪ್ರದಾಯ, ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಆದರೆ, ಇಂದಿನ ಆಧುನಿಕ ಕಾಲದಲ್ಲೂ ನಾವು ಅದನ್ನು ಅನುಸರಿಸುತ್ತಿರುವುದು ದುರಂತ. ಮಕ್ಕಳಲ್ಲಿ ವೈಚಾರಿಕ ಚಿಂತನೆ, ವೈಜ್ಞಾನಿಕ ಮನೋಭಾವ, ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಸಜ್ಜುಗೊಳಿಸಬೇಕು. ಅವರು ಪಡೆಯುವ ವಿದ್ಯೆಯು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿಯನ್ನು ನೀಡಬೇಕು. ರಾಧಾಕೃಷ್ಣನ್, ಸಾವಿತ್ರಿ ಬಾಯಿ ಫುಲೆಯವರ ಆದರ್ಶ, ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿ ಮಾತು ಹೇಳಿದರು.

ಸಂವಿಧಾನ ಜಾರಿಗೆ ಬಂದು 75 ವರ್ಷಗಳಾಗಿವೆ. ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೆ ಬಂದಿದೆ. ಆದರೂ, ಎಲ್ಲರಿಗೂ ಶಿಕ್ಷಣ ಸಿಕ್ಕಿಲ್ಲ. ಹಾಗಾಗಿ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಆಗ ಮಾತ್ರ ಶಿಕ್ಷಣ ಪಡೆದಿರುವುದು ಸಾರ್ಥಕವಾಗಿ ಮನುಷ್ಯ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.

ಶಿಕ್ಷಕರ ಸಮಸ್ಯೆಗಳ ಕುರಿತು ಶಿಕ್ಷಕರ ಸಂಘದ ಜೊತೆ ಚರ್ಚಿಸಿದ್ದೇನೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಭರವಸೆ ನೀಡಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ರಾಜ್ಯದ 25,000 ವಿದ್ಯಾರ್ಥಿಗಳಿಗೆ ಉಚಿತ ನೀಟ್, ಸಿಇಟಿ ಕೋಚಿಂಗ್ ಅನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ. ಆದರ್ಶ ವಿದ್ಯಾಲಯಗಳಲ್ಲಿ ಪಿಯು ತರಗತಿಗಳನ್ನು ಆರಂಭಿಸುವ ಚಿಂತನೆ ಇದೆ. ಇನ್ನು 2 ವಾರಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಾರದ ಎಲ್ಲಾ ದಿನ ಮೊಟ್ಟೆ ವಿತರಣೆ ಆರಂಭವಾಗುತ್ತದೆ. ಅಜೀಂ ಪ್ರೇಮ್‌ಜೀ ಫೌಂಡೇಶನ್ ಸಹಯೋಗದಲ್ಲಿ ಮೊಟ್ಟೆ ವಿತರಣೆಯನ್ನು 2 ದಿನಗಳಿಂದ 6 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಉಪಸ್ಥಿತರಿದ್ದರು.

Share this article