ವಿದ್ಯಾ ಕಾಂತರಾಜ್
ತಾಲೂಕನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಮಲೆನಾಡ ಜನರು ಮುಖ್ಯಮಂತ್ರಿಗಳನ್ನು ಕಾತುರದಿಂದ ಕಾದಿದ್ದಾರೆ.
ಹೌದು! ತಾಲೂಕಿನ ಜನರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಚರ್ಚೆಗಾಗಿಯೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಸೆಪ್ಟೆಂಬರ್ 20ರಂದು ಆಗಮಿಸುತ್ತಿದ್ದಾರೆ. ಮಲೆನಾಡ ಜನರು ನಿರೀಕ್ಷೆಯ ಮಹಾಪೂರವನ್ನೇ ಹೊತ್ತಿದ್ದು ಯಾವ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂಬ ಉತ್ತರಕ್ಕೆ ಭಾನುವಾರದ ಸಂಜೆಯವರೆಗೆ ಕಾದುನೋಡಬೇಕಿದೆ.ತಾಲೂಕಿನಲ್ಲಿ ವಾಣಿಜ್ಯ ಬೆಳೆಗಳಾದ ಕಾಳುಮೆಣಸು, ಕಾಫಿ ಹೊರತುಪಡಿಸಿ ಪ್ರಮುಖವಾಗಿ ಪ್ರವಾಸೋದ್ಯಮವನ್ನೇ ನಂಬಿರುವ ಜನರು ಸಾಕಷ್ಟು ಸಮಸ್ಯೆಗಳಿಂದ ತೊಳಲಾಡುತ್ತಿದ್ದಾರೆ. ಕಾಫಿ, ಮೆಣಸು ಹಾಗೂ ಭತ್ತ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಸಮಸ್ಯೆಯಾಗಿದ್ದು ಬೆಳೆದ ಬೆಳೆ ಕೈ ಹತ್ತುವುದು ದುಸ್ಥರವಾಗಿದೆ. ಅಲ್ಲದೇ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ವಾಣಿಜ್ಯ ಬೆಳೆಗಳು ಹಲವು ರೋಗಗಳಿಗೆ ತುತ್ತಾಗುತ್ತಿವೆ. ಇದಕ್ಕೆ ನಿಖರ ಪರಿಹಾರ ನೀಡಬೇಕು ಎಂಬ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಕಾಫಿ ಬೆಳೆಗಾರರು ಸರ್‍ಪೈಸಿ ಕಾನೂನು ಕುಣಿಕೆಗೆ ಸಿಲುಕಿ ತೊಳಲಾಡುತ್ತಿದ್ದು, ಬ್ಯಾಂಕ್‌ನಲ್ಲಿ ಸಾಲ ಮಾಡಿರುವ ಬೆಳೆಗಾರರ ತೋಟಗಳು ಬ್ಯಾಂಕಿನಿಂದ ಹರಾಜಿಗೆ ಒಳಪಡುತ್ತಿವೆ. ಕಾಫಿ ಕೃಷಿಯಿಂದ ಸರ್‍ಫೈಸಿ ಕಾನೂನು ಹೊರಗಿಡಿ ಎಂಬ ಬೇಡಿಕೆ ಸಹ ಈಡೇರದಾಗಿದೆ.
ಕಳೆದ ಮೂರು ದಶಕಗಳಿಂದ ಕಾಡಾನೆ ಸಮಸ್ಯೆ ಅತಿಯಾಗಿದ್ದು ಈಗಾಗಲೇ ೮೮ ಜನರು ಕಾಡಾನೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಂಘಟನೆಗಳು ಹಾಗೂ ಸಾರ್ವಜನಿಕರು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಎಂಬ ಒಂದಂಶವನ್ನಿಟ್ಟುಕೊಂಡು ಹೋರಾಟ ಮಾಡುತ್ತಿದ್ದರಾದರೂ ಇದುವರೆಗೆ ಪರಿಹಾರ ದೊರಕಿಲ್ಲ. ಇದಲ್ಲದೆ ಡೀಮ್ಡ್ ಅಂಶ ಸಾಮಾನ್ಯ ಜನರು ಮನೆ ಕಟ್ಟಲು ಸಾಧ್ಯವಿಲ್ಲದಂತೆ ಹೈರಾಣಾಗಿಸಿದ್ದು ತಾಲೂಕಿನ ಎಲ್ಲಿಯೇ ಹೋದರೂ ಡೀಮ್ಡ್ ಎಂಬ ಅಂಶವನ್ನು ಮುಂದಿಟ್ಟು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವುದರಿಂದ ಸಾಮಾನ್ಯ ಜನರಿಂದ ಸರ್ಕಾರದ ಕುಡಿಯುವ ನೀರಿನ ಯೋಜನೆಗೂ ತೊಂದರೆ ನೀಡಲಾಗುತ್ತಿದೆ.
ಇನ್ನು ಕಸ್ತೂರಿ ರಂಗನ್ ವರದಿ ಅಕ್ಷರಶಃ ಅವೈಜ್ಞಾನಿಕವಾಗಿದೆ ಎಂಬ ಅಂಶವನ್ನು ಮುಂದಿಟ್ಟು ಸಾಕಷ್ಟು ಹೋರಾಟ ನಡೆದಿವೆಯಾದರೂ ಆರನೇ ಕರಡು ಅಧಿಸೂಚನೆಯಲ್ಲಿದ್ದ ಒಂದಂಶವು ಏಳನೇ ಕರಡು ಅಧಿಸೂಚನೆಯಲ್ಲಿ ಹೊರತಾಗಿಲ್ಲ. ಇನ್ನು ತಾಲೂಕಿನ ಸಾಂಪ್ರದಾಯಿಕ ಬೆಳೆ ಎಂದು ಕರೆಸಿಕೊಳ್ಳುವ ಏಲಕ್ಕಿ ಬೆಳೆ ನಾಮಾವಶೇಷವಾಗಿದ್ದು ಬೆಳೆ ರಕ್ಷಿಸಲು ವಿಶೇಷ ಪ್ಯಾಕೇಜ್ ನೀಡುವ ಮೂಲಕ ಮಲೆನಾಡಿನ ಏಲಕ್ಕಿ ಬೆಳೆಗಾರರನ್ನು ರಕ್ಷಿಸಬೇಕು ಎಂಬ ಬೇಡಿಕೆ ಏಲಕ್ಕಿ ಬೆಳೆಗಾರರದ್ದು. ಏಲಕ್ಕಿ ಬೆಳೆಯನ್ನೆ ನಂಬಿದ್ದ ವಳಲಹಳ್ಳಿ ಹಾಗೂ ಹೊಂಗಡಹಳ್ಳ ಗ್ರಾಪಂ ವ್ಯಾಪ್ತಿಯ ಸುಮಾರು ೩೦ ಗ್ರಾಮಗಳ ಭೂಮಿ ಏಲಕ್ಕಿ ನಾಮಾವಶೇಷವಾದ ನಂತರ ಅರಣ್ಯವಾಗಿ ಬದಲಾಗಿರುವುದರಿಂದ ಇಲ್ಲಿನ ಜನರು ಬದುಕು ನಡೆಸುವುದೇ ದುಸ್ಥರವಾಗಿದೆ. ಇವರಿಗೆ ಹೊಸ ಬದುಕು ಕಲ್ಪಿಸುವ ಹೊಣೆ ಸರ್ಕಾರದ ಮೇಲಿದೆ.
ಎರಡು ದಶಕಗಳ ನಂತರ ಮುಖ್ಯಮಂತ್ರಿ ಆಗಮನ:
ತದನಂತರ ಯಡಿಯೂರಪ್ಪ ೨೦೦೯ ರಲ್ಲಿ ತಾಲೂಕಿಗೆ ಆಗಮಿಸಿದ್ದರಾದರೂ ಗುಂಡ್ಯ ಜಲವಿದ್ಯುತ್ ಯೋಜನೆಗೆ ಶಂಕು ನಡೆಸಿ ತೆರಳಿದ್ದರು. ಸದ್ಯ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಕೆಲವೇ ತಿಂಗಳಲ್ಲಿ ಪಟ್ಟಣಕ್ಕೆ ಆಗಮಿಸಿ ಹಿಂದೆ ಎಚ್.ಡಿ ಕುಮಾರಸ್ವಾಮಿ ಕಾರ್ಯಕ್ರಮ ನಡೆಸಿದ್ದ ಎಪಿಎಂಸಿ ಆವರಣದಲ್ಲೇ ಜನರ ಆಹವಾಲು ಕೇಳುತ್ತಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಕನಿಷ್ಠ ೧೦ ಸಾವಿರ ಜನರು ಸೇರುವ ನಿರೀಕ್ಷೆ ಇದ್ದು ಇದಕ್ಕಾಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾರೀ ಸಿದ್ಧತೆ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಶಾಮಿಯಾನ ಹಾಕುವ ಕಾರ್ಯ ನಡೆದಿದ್ದರೆ, ಭದ್ರತೆಗಾಗಿ ಬ್ಯಾರಿಕೇಡ್ ನಿರ್ಮಾಣ ಸಹ ಎರಡು ದಿನಗಳಿಂದ ನಡೆಯುತ್ತಿದೆ. ಕಾರ್ಯಕ್ರಮದ ಬಿಗಿಭದ್ರತೆಗಾಗಿ ಕೊಡಗು, ಚಿಕ್ಕಮಗಳೂರು, ಮೈಸೂರು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಒಂದು ಸಾವಿರ ಪೊಲೀಸರು, ೨೦ ಡಿವೈಎಸ್‌ಪಿಗಳು, ೬೦ ಕ್ಕೂ ಅಧಿಕ ಪಿಎಸ್‌ಐಗಳು ಭದ್ರತೆಯಲ್ಲಿ ತೊಡಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದು ಎರಡು ದಿನಗಳಿಂದ ತಾಲೂಕಿನಲ್ಲೇ ಬೀಡುಬಿಟ್ಟಿದ್ದಾರೆ.