ಮಧು ಬಂಗಾರಪ್ಪ ಅಪ್ಪಟ ಬಂಗಾರ. ಯಡಿಯೂರಪ್ಪ ಕುಟುಂಬದ ಕಾಗೆ ಬಂಗಾರದ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭಾ ಮಾಜಿ ಸದಸ್ಯ ಮಯೂರ್ ದರ್ಶನ್ ಉಳ್ಳಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಮಧು ಬಂಗಾರಪ್ಪ ಅಪ್ಪಟ ಬಂಗಾರ. ಯಡಿಯೂರಪ್ಪ ಕುಟುಂಬದ ಕಾಗೆ ಬಂಗಾರದ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭಾ ಮಾಜಿ ಸದಸ್ಯ ಮಯೂರ್ ದರ್ಶನ್ ಉಳ್ಳಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಶನಿವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ತೆವಲಿಗಾಗಿ ಸಂಸದ ರಾಘವೇಂದ್ರ ಸಾರ್ವಜನಿಕ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪನವರನ್ನು ಟೀಕಿಸಿದ್ದು 2013ರಲ್ಲಿ ಜೆಡಿಎಸ್ ಶಾಸಕರಾಗಿದ್ದ ಮಧು ಬಂಗಾರಪ್ಪ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಪಕ್ಷ ಬೇಧ ಮರೆತು 6200 ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಿದ್ದಾರೆ, ಬಾಯಿಗೆ ಬಂದ ಹಾಗೆ ಮಾತನಾಡುವ ಸ್ಥಳೀಯ ಶಾಸಕ, ಸಂಸದರು 1200 ಅಧಿಕ ಸಾಗುವಳಿದಾರರ ಅರ್ಜಿಯನ್ನು ವಜಾಗೊಳಿಸಿ ರೈತ ವಿರೋಧಿ ಎಂಬ ಹಣೆಪಟ್ಟಿ ಹೊಂದಿದ್ದಾರೆ ಎಂದು ಟೀಕಿಸಿದರು.

ಸಿಎಂ ಡಿಕೆ ಶಿವಕುಮಾರ್ ಜನಸಾಮಾನ್ಯರ ಮನೆಬಾಗಿಲಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆ ಮೇರೆಗೆ ಆರಂಭಿಸಿದ ಪ್ರಜಾಸೇವೆಯನ್ನು ಕಪಟ ನಾಟಕ ಎಂದು ಹೀಗಳೆದ ಸಂಸದರು, ಕಾರ್ಯಕ್ರಮದಲ್ಲಿ ಸಚಿವರ ಜತೆ ಸತತ 3 ಗಂಟೆ ಪಾಲ್ಗೊಂಡಿದ್ದು, ನಾಟಕದಲ್ಲಿ ಶಕುನಿ ಪಾತ್ರಕ್ಕಾಗಿ ಬಂದಿದ್ದರಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪನವರ ಬಗ್ಗೆ ಶಿಕಾರಿಪುರಕ್ಕೆ ಬಂದು ಮಾತನಾಡುವ ನೈತಿಕತೆ ಮಧುಗಿಲ್ಲ ಎಂದ ಸಂಸದರು, ಬಂಗಾರಪ್ಪನವರು ಬಿಜೆಪಿಗೆ ಸೇರ್ಪಡೆಯಾಗದಿದ್ದಲ್ಲಿ ಮುಖ್ಯಮಂತ್ರಿ ಹಾಗೂ ನೀವು ಸಂಸದ ಶಾಸಕರಾಗುತ್ತಿರಲಿಲ್ಲ, ಅಧಿಕಾರದ ಅಮಲಿನಲ್ಲಿ ತೇಲುತ್ತಿರಲಿಲ್ಲ ಎಂದರು.

ಮಧು ಬಂಗಾರಪ್ಪನವರ ಸಣ್ಣ ಪಾದಯಾತ್ರೆಗೆ ಬೆಚ್ಚಿಬಿದ್ದು ಸಂಸದರು ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ವಿಶ್ಲೇಷಿಸಿದ ಅವರು, 2013ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಗೊಂಡ ಕೊಪ್ಪದ ಕೆರೆ ಏತ ನೀರಾವರಿ ಯೋಜನೆ ಮೂಲಕ ತಾಲೂಕಿನ ಎಲ್ಲ ಯೋಜನೆಗೆ ಚಾಲನೆ ದೊರೆತಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಾಸಕರು ಕೈಗೊಂಡ ಪಾದಯಾತ್ರೆ ರೀತಿ ಮಧು ಮಾಡಲಿಲ್ಲ, ಸೊರಬ ಶಿಕಾರಿಪುರ ರೈತರ ಉಳಿವಿಗಾಗಿ ಮಧು ಬಂಗಾರಪ್ಪ ಅಧಿಕಾರವಿಲ್ಲದಿದ್ದಾಗ ಪಾದಯಾತ್ರೆ ಪರಿಣಾಮ ಶಿಕಾರಿಪುರಕ್ಕೆ ಏತ ನೀರಾವರಿಗೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಡಿಪಿಆರ್ ಸಿದ್ದಪಡಿಸಲು ರು.80 ಲಕ್ಷ ನಂತರದಲ್ಲಿ ಸಿಎಂ ಕುಮಾರಸ್ವಾಮಿ ರು.600 ಕೋಟಿ ಮೀಸಲಿಟ್ಟು ಯೋಜನೆಗೆ ಸಚಿವ ಮಧುರವರ ಕೊಡುಗೆ ಬಹು ಮಹತ್ವದ್ದಾಗಿದೆ ಎಂದು ತಿಳಿಸಿದರು.

ಬಾಗ್ಯಲಕ್ಷ್ಮಿ ಯೋಜನೆಗೆ 18 ವರ್ಷ ಕಾಯಬೇಕಾಗಿದ್ದು, ಇದೀಗ ಗೃಹಲಕ್ಷ್ಮಿ ಯೋಜನೆ ಮೂಲಕ ಕಳೆದ 32 ತಿಂಗಳಲ್ಲಿ ಪ್ರತಿ ಕುಟುಂಬಕ್ಕೆ 64 ಸಾವಿರ ನೀಡಿದ ಬಗ್ಗೆ ವಿಚಲಿತರಾಗಿ ಸಂಸದರು, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪುನಃ ಸಚಿವ ಮಧು ಬಗ್ಗೆ ಹಗುರವಾಗಿ ಟೀಕಿಸಿದಲ್ಲಿ ಶಾಸಕ, ಸಂಸದರಿಗೆ ಘೇರಾವ್ ಹಾಕಲಾಗುವುದು ಎಂದರು.

ಗೋಷ್ಠಿಯಲ್ಲಿ ತಾ.ಅಹಿಂದ ಒಕ್ಕೂಟದ ಅಧ್ಯಕ್ಷ ನಗರದ ಮಾಲತೇಶ್, ಆಶ್ರಯ ಸಮಿತಿ ಸದಸ್ಯ ರೇಣುಕಸ್ವಾಮಿ, ಬಗರ್ ಹುಕುಂ ಸಮಿತಿ ಸದಸ್ಯ ದಯಾನಂದ್ ಇದ್ದರು.