MLA Rahim holds 'Praja Seva Sabha' in Chillargi
ಕನ್ನಡಪ್ರಭ ವಾರ್ತೆ ಬೀದರ್
ಶಾಸಕರಾದ ರಹೀಮ್ ಖಾನ್ ಅವರು ಶನಿವಾರ ಚಿಲ್ಲರ್ಗಿ ಗ್ರಾಮದಲ್ಲಿ ಪ್ರಜಾ ಸೇವಾ ಸಭೆ ನಡೆಸಿ, ಸಮಾಜದ ವಿವಿಧ ವರ್ಗಗಳ ಜನರ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿದರು.ಸಭೆಯಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ವಿಧವೆಯರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗಗಳ ಜನರು ಸೇರಿದಂತೆ ವಿವಿಧ ವರ್ಗಗಳ ಸಾರ್ವಜನಿಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ಕುಡಿಯುವ ನೀರು, ವಿದ್ಯುತ್, ಪಿಂಚಣಿ, ಬೆಳೆ ನಷ್ಟ, ಶಾಲಾ ಮೂಲಸೌಕರ್ಯ, ಶಿಕ್ಷಣ ಸಾಲ, ರೈತರ ಸಬ್ಸಿಡಿ, ಪಶುಸಂಗೋಪನೆ, ಗ್ರಾಮೀಣ ವಸತಿ ಹಾಗೂ ಜೀವನೋಪಾಯ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.ಶಾಸಕ ರಹೀಮ್ ಖಾನ್ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ಸಾಧ್ಯವಾದಷ್ಟು ತುರ್ತು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಕ್ರಮ ಕೈಗೊಂಡರು. ಬಾಕಿ ಇರುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು, ನಿಯಮಾನುಸಾರ ಶೀಘ್ರವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಚಿಲ್ಲರ್ಗಿ ಗ್ರಾಮದಲ್ಲಿ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಶಾಸಕ ರಹೀಮ್ ಖಾನ್ ಅವರು ಮಾಳೆಗಾಂವ್ ರಸ್ತೆಯಲ್ಲಿ ಕೊಳವೆಬಾವಿ ಕೊರೆಯುವ ಕಾಮಗಾರಿಗೆ ಚಾಲನೆ ನೀಡಿದರು.ಪ್ರಜಾ ಸೇವಾ ಸಭೆಯ ಬಳಿಕ ಶಾಸಕ ರಹೀಮ್ ಖಾನ್ ಅವರು ಚಿಲ್ಲರ್ಗಿ ಗ್ರಾಮದ ವಿವಿಧ ವಾರ್ಡಗಳಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದರು. ವಿಧವೆ ಹಾಗೂ ವಿಶೇಷಚೇತನ ಮಹಿಳೆಯ ಮನೆಯಲ್ಲಿ ಮಧ್ಯಾಹ್ನದ ಊಟ, ಜನರೊಂದಿಗೆ ಆತ್ಮೀಯವಾಗಿ ಬೆರೆಯುವ ನಿಟ್ಟಿನಲ್ಲಿ ಶಾಸಕ ರಹೀಮ್ ಖಾನ್ ಅವರು ವಿಧವೆ ಹಾಗೂ ವಿಶೇಷಚೇತನ ಮಹಿಳೆಯೊಬ್ಬರ ಮನೆಗೆ ಭೇಟಿ ನೀಡಿ, ಅವರ ನಿವಾಸದಲ್ಲಿಯೇ ಮಧ್ಯಾಹ್ನದ ಊಟ ಸೇವಿಸಿದರು.ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಸಾಧ್ಯವಾದ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಮೂಲಕ ಜನಕೇಂದ್ರಿತ ಸೇವೆಗೆ ಆಧ್ಯತೆ ನೀಡಲಾಗುವುದು ಎಂದು ಶಾಸಕ ರಹೀಮ್ ಖಾನ್ ತಿಳಿಸಿದರು.