ಕನ್ನಡಪ್ರಭ ವಾರ್ತೆ ಬೀದರ್
ಶಾಸಕ ರಹೀಮ್ ಖಾನ್ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ಸಾಧ್ಯವಾದಷ್ಟು ತುರ್ತು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಕ್ರಮ ಕೈಗೊಂಡರು. ಬಾಕಿ ಇರುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು, ನಿಯಮಾನುಸಾರ ಶೀಘ್ರವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಚಿಲ್ಲರ್ಗಿ ಗ್ರಾಮದಲ್ಲಿ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಶಾಸಕ ರಹೀಮ್ ಖಾನ್ ಅವರು ಮಾಳೆಗಾಂವ್ ರಸ್ತೆಯಲ್ಲಿ ಕೊಳವೆಬಾವಿ ಕೊರೆಯುವ ಕಾಮಗಾರಿಗೆ ಚಾಲನೆ ನೀಡಿದರು.ಪ್ರಜಾ ಸೇವಾ ಸಭೆಯ ಬಳಿಕ ಶಾಸಕ ರಹೀಮ್ ಖಾನ್ ಅವರು ಚಿಲ್ಲರ್ಗಿ ಗ್ರಾಮದ ವಿವಿಧ ವಾರ್ಡಗಳಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದರು. ವಿಧವೆ ಹಾಗೂ ವಿಶೇಷಚೇತನ ಮಹಿಳೆಯ ಮನೆಯಲ್ಲಿ ಮಧ್ಯಾಹ್ನದ ಊಟ, ಜನರೊಂದಿಗೆ ಆತ್ಮೀಯವಾಗಿ ಬೆರೆಯುವ ನಿಟ್ಟಿನಲ್ಲಿ ಶಾಸಕ ರಹೀಮ್ ಖಾನ್ ಅವರು ವಿಧವೆ ಹಾಗೂ ವಿಶೇಷಚೇತನ ಮಹಿಳೆಯೊಬ್ಬರ ಮನೆಗೆ ಭೇಟಿ ನೀಡಿ, ಅವರ ನಿವಾಸದಲ್ಲಿಯೇ ಮಧ್ಯಾಹ್ನದ ಊಟ ಸೇವಿಸಿದರು.ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಸಾಧ್ಯವಾದ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಮೂಲಕ ಜನಕೇಂದ್ರಿತ ಸೇವೆಗೆ ಆಧ್ಯತೆ ನೀಡಲಾಗುವುದು ಎಂದು ಶಾಸಕ ರಹೀಮ್ ಖಾನ್ ತಿಳಿಸಿದರು.