ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಲ್ಲಿ ಕಳೆದ ೨೭ ದಿನಗಳಿಂದ ನಡೆಯುತ್ತಿರುವ ರೈತಸಂಘದ ಅಹೋರಾತ್ರಿ ಧರಣಿ ಸ್ಥಳಕ್ಕೆ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶ್ರೀರೂಪ, ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಮುತ್ತುರಾಜು ಜತೆ ಭೇಟಿ ನೀಡಿ ಧರಣಿ ನಿರತರ ಬೇಡಿಕೆ ಕೇಳಿದರು.
ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಕಳೆದ ೨೭ ದಿನಗಳಿಂದ ಅಹೋ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದೇವೆ.ಕಳೆದ ನವಂಬರ್ ನಲ್ಲೂ ೩೭ ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ್ದೆವು. ಆಗ ಜಿಲ್ಲಾಡಳಿತ ನೀಡಿದ್ಧ ಭರವಸೆ ಮೇರೆಗೆ ಪ್ರತಿಭಟನೆ ತಾತ್ಕಾಲಿಕವಾಗಿ ನಿಲ್ಲಿಸಿದ್ದೆವು ಎಂದರು.ಅಂದು ಜಿಲ್ಲಾಡಳಿತ ನೀಡಿದ ಭರವಸೆ ಈಡೇರಿಸಿಲ್ಲ. ಇತ್ತ ೪ನೇ ಹಂತದ ಕೆರೆಗಳಿಗೆ ೯ ತಿಂಗಳಿನಿಂದಲೂ ನೀರು ಬರಲಿಲ್ಲ. ಹಾಗಾಗಿ ಮತ್ತೆ ಅಹೋರಾತ್ರಿ ಧರಣಿ ಆರಂಭಿಸಿ ೨೭ ದಿನಗಳಾಗುತ್ತಿದೆ, ಸದ್ಯ ಇಂದು ಭೇಟಿ ನೀಡಿ ಸಮಸ್ಯೆ ಆಲಿಸಲು ಬಂದಿದ್ದೀರಾ? ಕೆರೆಗಳಿಗೆ ನೀರು ಬಿಡಬೇಕು,ಸಾಗುವಳಿ ನೀಡಬೇಕು, ಈ ಎರಡು ವಿಚಾರಕ್ಕೆ ನಿಮ್ಮ ಉತ್ತರ ನೀಡಿ ಎಂದು ಒತ್ತಾಯಿಸಿದರು.
ಈಗ ಹಳೇಪುರ ಕೆರೆ ಬಳಿ ಪ್ರತಿಭಟನೆ, ಅತ್ತ ಅರಕಲವಾಡಿ ಕೆರೆ ಬಳಿ ಪ್ರತಿಭಟನೆ, ಇಲ್ಲಿ ನೀವು ಪ್ರತಿಭಟನೆ ಎಲ್ಲಿಗೆ ಅಂತ ನೀರು ಬಿಡೋದು ಹೇಳಿ, ರೈತರು ಅರ್ಥ ಮಾಡಿಕೊಳ್ಳಿ, ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಿ, ನೀರು ಎಲ್ಲರೂ ಹಂಚಿಕೊಳ್ಳಬೇಕು ಎಂದರು.
ಅಲ್ಲದೆ ೪ನೇ ಹಂತದ ಕೆರೆಗೆ ನೀರು ಬಿಟ್ಟರೂ ನಾಲ್ಕನೇ ಕಾಲು ಭಾಗದಷ್ಟು ನೀರು ೩ನೇ ಹಂತದ ಅರಕಲವಾಡಿ ಹಾಗೂ ಸುವರ್ಣನಗರ ಕೆರೆಗಳಿಗೆ ನೀರು ಬಿಡಬೇಕು ಎಂದು ಹೇಳಿದಾಗ ಆಕ್ರೋಶಗೊಂಡ ರೈತ ಮುಖಂಡ ಶಿವಪುರ ಮಹದೇವಪ್ಪ, ಸರ್ ನೀವು ಜಿಲ್ಲಾ ಉಸ್ತುವಾರಿ ಸಚಿವರು, ಚಾಮರಾಜನಗರಕಲ್ಲ, ೪ನೇ ಹಂತದ ಕೆರೆಗಳಿಗೆ ನೀರು ಬಿಡಿಸಿ ಎಂದು ಆಗ್ರಹಿಸಿದರು.
ರೈತರು ಸಚಿವರ ಮಾತಿಗೆ ಆಕ್ಷೇಪ ಹಾಗೂ ಆಕ್ರೋಶ ಹೊರಹಾಕಿದಾಗ ಸಚಿವರು ಮತ್ತೆ ಮಾತನಾಡಿ, ಪೈಪ್‌ಲೈನ್ ಆಗೋ ತನಕ ನೀರು ಬಿಡಲಾಗುವುದಿಲ್ಲ. ಬಿಟ್ಟರೂ ಚಾ.ನಗರ ತಾಲೂಕಿನ ೨ ಕೆರೆಗಳಿಗೆ ನೀರು ಬಿಡಬೇಕು ಎಂದು ಸಚಿವರು ರೈತರ ಮನವಿ ಸ್ವೀಕರಿಸಿ ಹೊರ ನಡೆದರು.
ಪುಟ್ರಂಗಶೆಟ್ರು ಎಲ್ಲಿಗೆ ಉಸ್ತುವಾರಿ ಸಚಿವ್ರು!
ಪ್ರತಿಭಟನೆಯಲ್ಲಿ ಮಾತನಾಡಿ ಪುಟ್ಟರಂಗಶೆಟ್ಟರು ಜಿಲ್ಲಾ ಉಸ್ತುವಾರಿ ಸಚಿವರಂತೆ ನಡೆದುಕೊಳ್ಳುತ್ತಿಲ್ಲ.ಮಾತೆತ್ತಿದರೆ ನಮ್ಮ ತಾಲೂಕಿನ ಕೆರೆಗಳಿಗೆ ಮೊದಲು ನೀರು ಹರಿಯಬೇಕು ಎಂದು ಹೇಳುತ್ತಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ನಡವಳಿಕೆ ಹಾಗೂ ಅವರ ಮಾತು ನೋಡಿದರೆ ೪ ನೇ ಹಂತದ ಕೆರೆಗಳಿಗೆ ನೀರು ಹರಿಸುವುದಿಲ್ಲ ಹಾಗಾಗಿ ರಾಜ್ಯ ಸಮಿತಿಯೊಂದಿಗೆ ಇಂದು ಚರ್ಚಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.