ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿಗಳು ಟೌನ್‌ಶಿಪ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಬಿಟ್ಟು ರೈತರ ನೆರವಿಗೆ ಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ರಟ್ಟೀಹಳ್ಳಿ:ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿಗಳು ಟೌನ್‌ಶಿಪ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಬಿಟ್ಟು ರೈತರ ನೆರವಿಗೆ ಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ತಾಲೂಕಿನ ಚಟ್ನಳ್ಳಿ ಜಾಕ್‌ವೆಲ್ ಬಳಿ ನಡೆದ ಧರಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಬಿಟ್ಟು ಬೆಂಗಳೂರು ಅಭಿವೃದ್ಧಿಯೇ ರಾಜ್ಯದ ಅಭಿವೃದ್ಧಿ ಎಂದು ಭಾವಿಸಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬಿಡದಿ ಟೌನ್‌ಶಿಪ್ ವಿಚಾರಕ್ಕೆ ತೋರಿಸುವ ಆಸಕ್ತಿಯಷ್ಟೇ ಉತ್ತರ ಕರ್ನಾಟಕದ ಬರಪೀಡಿತ ರೈತರ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಬರಗಾಲದಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರ ಪ್ರತಿ ಎಕರೆಗೆ ರು. 50 ಸಾವಿರ ಪರಿಹಾರ ನೀಡಬೇಕು, ಕೇಂದ್ರ ಸರಕಾರಕ್ಕೆ ಬೊಟ್ಟು ಮಾಡದೇ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಎಸಿ ರೂಂಗಳಲ್ಲಿ ಅಧಿಕಾರಿಗಳ ಜತೆ ಕಾಲಹರಣ ಮಾಡುವುದನ್ನು ಬಿಟ್ಟು ಶಾಸಕರು, ಸಚಿವರುಗಳನ್ನು ಬರಪೀಡಿತ ಪ್ರದೇಶಗಳ ರೈತರ ನೈಜ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ರೈತರ ಪರವಾಗಿ ಬಿಜೆಪಿ ಹೋರಾಟ ಕೈಗೊಳ್ಳಲಿದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳು ರೈತರ ಸಮಸ್ಯೆಗಳ ಬಗ್ಗೆ ಹಾಗೂ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಸೂಕ್ತ ಅನುದಾನಕ್ಕೆ ಪ್ರಧಾನಮಂತ್ರಿಗಳಿಗೆ ಕೇವಲ ಪತ್ರ ಬರೆದು ಸುಮ್ಮನೆ ಕೂರುತ್ತಾರೆ. ಆದರೆ ಸಚಿವ ಸಂಪುಟ ವಿಸ್ತರಣೆಗೆ 4-5 ಬಾರಿ ದೆಹಲಿಗೆ ಹೋಗುವ ಶಿವಕುಮಾರಗೆ ರೈತರ ಮೇಲೆ ಎಷ್ಟು ಕಾಳಜಿ ಇದೆ ಎಂಬುದನ್ನು ತೋರಿಸುತ್ತಿದೆ. ರಾಹುಲ್ ಗಾಂಧಿ ವರ್ಷದಲ್ಲಿ 8 ತಿಂಗಳು ವಿದೇಶ ಪ್ರವಾಸದಲ್ಲಿ ಇರುತ್ತಾರೆ. ಆದಕಾರಣ ಸಿಗುವ ಅಲ್ಪ ಸಮಯದಲ್ಲಿ ಎಲ್ಲದಕ್ಕೂ ಒಪ್ಪಿಗೆ ಪಡೆಯುವಂತ ಕರ್ಮ ಕಾಂಗ್ರೆಸ್ ಸರ್ಕಾರದ್ದಾಗಿದೆ ಎಂದು ಟೀಕಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.